ಬೆಂಗಳೂರು.
ರಾಜ್ಯ ಸರ್ಕಾರದ ವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷಗಳು ಆಪಾದಿಸುವುದು ಮಾಮೂಲಿ. ಆದರೆ ಇಲ್ಲೀಗ ಆಡಳಿತ ಪಕ್ಷದ ಶಾಸಕರೇ 22 ಸಾವಿರದ 200 ಕೋಟಿ ಮೊತ್ತದ ಟೆಂಡರ್ ಅಕ್ರಮ ನಡೆದಿದೆ ಎಂದು ಆಪಾದಿಸಿದ್ದಾರೆ. ‘ಜಲ ಸಂಪನ್ಮೂಲ ಇಲಾಖೆಯ (Water Resources Department) ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ಮಾಡಲಾಗಿದೆ’ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ (Gulihatti D Shekar) ಟೆಂಡರ್‌ಗಳನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಕ್ರಮದ ಕುರಿತು ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಗೆ ಪತ್ರ ದೂರು ನೀಡಿರುವ ಅವರು, ಕಾಮಗಾರಿಗಳ ಕಾರ್ಯಾದೇಶ ರದ್ದುಪಡಿಸಿ ಮರು ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ. ಕೃಷ್ಣಾಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮಗಳಲ್ಲಿ ನಿಗದಿತ ಕಾಮಗಾರಿಗಳ ಟೆಂಡರ್ ನೀಡುವ ಮುನ್ನವೇ ಅಕ್ರಮ ಕೂಟ ಮಾಡಿಕೊಳ್ಳಲಾಗಿದೆ. ಎಲ್ಲ ನಿಗಮಗಳ ಆಡಳಿತ ಮಂಡಳಿಗಳ ಸಭೆಯನ್ನು ಒಂದೇ ದಿನ ನಡೆಸಿ 18 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ವಿಶ್ವೇಶ್ವರಯ್ಯ ಜಲ ನಿಗಮದಲ್ಲಿ 4,200 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳ ಟೆಂಡರ್ ಪೂರ್ಣಗೊಳಿಸಲಾಗಿದೆ. ಪಾರದರ್ಶಕತೆಯನ್ನು ಕಾಯ್ದುಕೊಳ್ಳದೇ, ಸಾವಿರಾರು ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆಯನ್ನು ಕೇವಲ 7 ದಿನಗಳಲ್ಲಿ ಅಂತಿಮಗೊಳಿಸಲಾಗಿದೆ. ನಿಯಮ ಪಾಲಿಸದೇ ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ, ಕಾರ್ಯಾದೇಶ ನೀಡಲಾಗಿದೆ. ಅಕ್ರಮ ಕೂಟ ಮಾಡಿಕೊಂಡು ವ್ಯವಹಾರ ಮಾಡಿರುವುದೇ ಈ ತರಾತುರಿಗೆ ಕಾರಣ ಎಂದು ಪತ್ರದಲ್ಲಿ ದೂರಿದ್ದಾರೆ. ಈ ರೀತಿಯಲ್ಲಿ ಪಡೆದಿರುವ ಗುತ್ತಿಗೆಯಿಂದಾಗಿ ಕಳಪೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.