ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವೆಸ್ಟೆಂಡ್ ರಾಜಕಾರಣಿ,ನಿಮ್ಮ ಸಿಡಿ ರಾಜಕಾರಣ ಎಲ್ಲರಿಗೂ ಗೊತ್ತಿದೆ ತಮ್ಮ ಸ್ವಜಾತಿಯನ್ನು ಬಿಟ್ಟು ಹೊರಗಡೆ ಬರದೆ ಇರುವ ಒಬ್ಬ ಕೂಪಮಂಡೂಕ ನಾಯಕ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ BJP ನಾಯಕ ರವಿ ಕುಮಾರ್ ಅವರು ಕುಮಾರಸ್ವಾಮಿ ಅವರು ಸ್ವಾರ್ಥತನ, ಕೂಪಮಂಡೂಕತನ, ಸ್ವಜಾತಿ ಪಕ್ಷಪಾತಕ್ಕೆ ಜ್ವಲಂತ ಉದಾಹರಣೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರು ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡುವುದನ್ನು ಬಿಜೆಪಿ ಖಂಡಿಸುತ್ತದೆ. ಸಾವರ್ಕರ್, ಗೋಪಾಲಕೃಷ್ಣ ಗೋಖಲೆ, ರಾನಡೆ, ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರೆಲ್ಲರೂ ಬ್ರಾಹ್ಮಣರಾದರೂ ಸ್ವಂತ ಜಾತಿಯ ಬಗ್ಗೆ ಕಿಂಚಿತ್ತೂ ಯೋಚಿಸಿರಲಿಲ್ಲ ಎಂದು ತಿಳಿಸಿದರು.
ಕುಮಾರಸ್ವಾಮಿಯವರು ನಿಸ್ವಾರ್ಥಿ, ಉದಾರಿ ರಾಜಕಾರಣಿ ಆಗಿದ್ದರೆ ನಿಮ್ಮ ಮನೆಯನ್ನು ಬಿಟ್ಟು ಹೊರಗಡೆ ಬಂದು ಯೋಚಿಸಬೇಕು. ಕುಮಾರಸ್ವಾಮಿ, ರೇವಣ್ಣ, ದೇವೇಗೌಡರ ಕುಟುಂಬವನ್ನು ಬಿಟ್ಟು ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಪ್ರಕಟಿಸಿ ಎಂದು ವಿನಂತಿ ಮಾಡುವುದಾಗಿ ಹೇಳಿದರು.
ಕುಮಾರಸ್ವಾಮಿಯವರು ಅಧಿಕಾರದಲ್ಲಿದ್ದಾಗ ವಿಧಾನಸೌಧದಿಂದ ಆಡಳಿತ ನಡೆಸುತ್ತಿರಲಿಲ್ಲ. ದೇವೇಗೌಡರ ಮನೆಯಿಂದ ಆಡಳಿತ ಮಾಡಿರಲಿಲ್ಲ. ನೀವು ಆಡಳಿತದಲ್ಲಿ ಇದ್ದಾಗ ತಾಜ್ ವೆಸ್ಟೆಂಡ್‍ನಿಂದ ಆಡಳಿತ ನಡೆಸಿದ್ದಲ್ಲವೇ? ಜನ ಮರೆತಿದ್ದಾರೆ ಎಂದು ನೀವು ಭಾವಿಸಿದ್ದೀರಲ್ಲವೇ. ನೀವು ಎಷ್ಟೊಂದು ಸ್ವಾರ್ಥಿ ರಾಜಕಾರಣಿ ಎಂಬುದನ್ನು ಕರ್ನಾಟಕದ ಜನರು ಕಂಡಿದ್ದಾರೆ ಎಂದು ತಿಳಿಸಿದರು.
RSSನವರು ಮಹಾತ್ಮ ಗಾಂಧೀಜಿ ಅವರ ಹತ್ಯೆ ಮಾಡಿದರು ಎಂದು ಹೇಳಿದ್ದೀರಿ. ಆಗ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿತ್ತು. ಕಾಂಗ್ರೆಸ್ ಪಕ್ಷ ತನಿಖೆಗೆ ಜಸ್ಟಿಸ್ ಕಪೂರ್ ಆಯೋಗವನ್ನು ನೇಮಿಸಿತ್ತು. ಅಕಸ್ಮಾತ್ ಓದುವ ಅಭ್ಯಾಸ ಇದ್ದರೆ ಆ ಆಯೋಗದ ವರದಿಯನ್ನು ದಯವಿಟ್ಟು ಓದಿ ಎಂದು ಸಲಹೆ ಮಾಡಿದರು
ಕುಮಾರಸ್ವಾಮಿ ಅತ್ಯಂತ ಸ್ವಾರ್ಥಿ ರಾಜಕಾರಣಿ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗಾಗಲೀ, ಕಾಂಗ್ರೆಸ್ ಪಕ್ಷಕ್ಕಾಗಲೀ ಬಹುಮತ ಬರಬಾರದು; ಅತಂತ್ರ ಪರಿಸ್ಥಿತಿ ಬರಬೇಕು. ನಾನು ನಿರ್ಧಾರ ಮಾಡುವವನಾಗಬೇಕು; ನನ್ನ ಮನೆ ಬಾಗಿಲಿಗೆ ಬರಬೇಕು. ಎಂಬ ಅತ್ಯದ್ಭುತ ಆಸೆಯನ್ನು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.
ಕುಮಾರಸ್ವಾಮಿಯವರ ಸಿ.ಡಿ., ತಾಜ್ ವೆಸ್ಟೆಂಡ್ ಹೋಟೆಲ್, ಅವರ ಮನೆ, ಅವರ ತೋಟದ ಮನೆ ಇವೆಲ್ಲ ಪ್ರಕರಣಗಳು ನನಗೂ ಗೊತ್ತಿವೆ. ಅವರು ಇದೇ ಥರ ಮಾತನಾಡುತ್ತಿದ್ದರೆ ನಾವು ಕೂಡ ರಾಜಕಾರಣ ಮಾಡಲು ಬಂದವರು ಎಂಬುದನ್ನು ತಿಳಿದುಕೊಳ್ಳಲಿ ಎಂದು ಸವಾಲೆಸೆದರು.