ಬೆಂಗಳೂರು, ಆ.26- ರಾಜ್ಯದಲ್ಲಿ ಬಿಜೆಪಿ ನಾಯಕರು ಬೀದಿ ಪಾಲಾಗಿದ್ದಾರೆ.
ಈ ನಾಯಕರದು ಎಂತಹಾ ದುಸ್ಥಿತಿ.ರಾಜ್ಯ ಬಿಜೆಪಿಯ ‘ದಂಡ’ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಯಶಸ್ವಿಯಾಗಿ ಚಂದ್ರಯಾನ ಪ್ರಯೋಗ ಮಾಡಿರುವ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ
ವಿದೇಶ ಪ್ರವಾಸ ಮುಗಿಸಿ ನೇರವಾಗಿ ಬೆಂಗಳೂರಿನ ಇಸ್ರೋಗೆ ಭೇಟಿ ನೀಡಿದರು. ಈ ವೇಳೆ ಪ್ರಧಾನಿಯವರನ್ನು ನೋಡಲು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಮಂತ್ರಿಗಳಾದ ಆರ್.ಅಶೋಕ್, ಮುನಿರತ್ನ, ಗೋಪಾಲಯ್ಯ
ಹಿರಿಯ ಶಾಸಕರಾದ ಎಸ್.ಆರ್.ವಿಶ್ವನಾಥ್, ಎಂ.ಕೃಷ್ಣಪ್ಪ ಮತ್ತಿತರರು ಜನಸಾಮಾನ್ಯರ ಜೊತೆ ರಸ್ತೆ ಬದಿಯಲ್ಲಿ ನಿಂತಿದ್ದರು.
ಈ ರಸ್ತೆಯಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ಜನ ಸಾಮಾನ್ಯರತ್ತ ಕೈ ಬೀಸುವಂತೆ ಕೈ ಬಳಸಿಕೊಂಡು ಸಾಗಿದರೆ ನೂಕು ನುಗ್ಗಲಿನಲ್ಲಿ ನಿಂತ ಈ ನಾಯಕರು ಪ್ರಧಾನಿ ಅವರತ್ತ ಕೈ ಬೀಸಿದರು.ಅದನ್ನು ನೋಡಿದರೂ ನೋಡದಂತೆ ಪ್ರಧಾನಿ ಮೋದಿ ಮುಂದೆ ಸಾಗಿದರೆ ಈ ನಾಯಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ ಬಂದರು.
ಈ ಎಲ್ಲಾ ಫೋಟೋಗಳನ್ನು ಜಾಲ ತಾಣಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಬಿಜೆಪಿ ನಾಯಕರನ್ನು ಬೀದಿ ಪಾಲಾಗಿದ್ದಾರೆ ಎಂದು ವ್ಯಾಖ್ಯಾನಿಸಿ ಲೇವಡಿ ಮಾಡಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹೈಕಮಾಂಡ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ ಎಂದು ಟ್ವೀಟ್ ಮಾಡಿದೆ.
ರಾಜ್ಯ ಬಿಜೆಪಿ ನಾಯಕರಿಗೆ ಕನಿಷ್ಠ ಮರ್ಯಾದೆಯೂ ಇಲ್ಲದಾಯಿತೇ, ಛೇ ಎಂದು ಅನುಕಂಪ ವ್ಯಕ್ತಪಡಿಸಿದೆ. ರಾಜ್ಯದ ಬಿಜೆಪಿ ನಾಯಕರಿಗೆ ಹೈಕಮಾಂಡ್ ನಾಯಕರು ಕನಿಷ್ಠ ಮಾನ್ಯತೆಯನ್ನೂ ಕೊಡುತ್ತಿಲ್ಲ.ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ. ಕರ್ನಾಟಕ ಬಿಜೆಪಿ ಅಬ್ಬೇಪಾರಿಯಾಗಿದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ ಎಂದು ಲೇವಡಿ ಮಾಡಿದೆ.
LATEST KANNADA NEWS | KANNADA NEWS UPDATES