ಬೆಂಗಳೂರು,ಅ.20- ಹಿಂದಿನ ಬಿಜೆಪಿ (BJP) ಸರ್ಕಾರದ ವಿರುದ್ಧ ಪೋಸ್ಟರ್ ಅಭಿಯಾನದ ಮೂಲಕ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಗೆ ಇದೀಗ ಬಿಜೆಪಿ ಅದೇ ಅಸ್ತ್ರವನ್ನು ಪ್ರಯೋಗ ತೊಡಗಿಸಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ನ ಎಟಿಎಂ ಸರ್ಕಾರ ಎಂದು ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಇದೀಗ ಕಲೆಕ್ಷನ್ ವಂಶಾವಳಿ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ.
ಕನ್ನಡ ಹಾಗೂ ಇಂಗ್ಲಿಷ್‍ನಲ್ಲಿರುವ ಈ ಎರಡು ಪೋಸ್ಟರ್ ಗಳಿಗೆ ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ಎಂದು ಶೀರ್ಷಿಕೆ ನೀಡಲಾಗಿದೆ. ಇತ್ತೀಚೆಗೆ ಉದ್ಯಮಿ ಅಂಬಿಕಾಪತಿ ಮನೆಯ ಮಂಚದ ಕೆಳಗೆ ಬಾಕ್ಸ್ ನಲ್ಲಿ ಸಿಕ್ಕ 500 ಮುಖಬೆಲೆಯ ನೋಟುಗಳನ್ನು ಪ್ರದರ್ಶಿಸಲಾಗಿದೆ ಪೋಸ್ಟರ್ ನ ಮೇಲ್ಭಾಗದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಲಭಾಗದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಎಡಭಾಗದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಮಧ್ಯಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಭಾಗದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಳಭಾಗದಲ್ಲಿ ಡಾ.ಯತೀಂದ್ರ, ಸಚಿವ ಭೈರತಿ ಸುರೇಶ್, ಅಂಬಿಕಾಪತಿ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಪ್ರದೀಪ್, ಪ್ರಮೋದ್, ಪ್ರಹ್ಲಾದ್, ಅವರ ಭಾವಚಿತ್ರಗಳನ್ನು ಹಾಕಲಾಗಿದೆ.
ರಾಮಯ್ಯ ಮತ್ತು ಕೆಂಪಣ್ಣ ಅವರನ್ನು ಕಾಂಗ್ರೆಸ್ ಸರ್ಕಾರದ ಕಲೆಕ್ಷನ್ ಏಜೆಂಟ್‍ಗಳೆಂದು ಆರೋಪಿಸಲಾಗಿದೆ ಮತ್ತೊಂದು ಚಿತ್ರದಲ್ಲಿ ಪ್ರದೀಪ್, ಪ್ರಮೋದ್, ಪ್ರಹ್ಲಾದ್ ಅವರುಗಳನ್ನು ಕಲೆಕ್ಷನ್ ಏಜೆಂಟ್ ಎಂದು ಬಿಂಬಿಸಿದ್ದು, ಕಾಂಗ್ರೆಸ್ ಪಕ್ಷ ಲೂಟಿ ಕಂಪನಿ ಎಂದು ಆರೋಪಿಸಿದೆ.
ಕೇಂದ್ರದ ಮಾಜಿ ಸಚಿವ ಸದಾನಂದಗೌಡ, ಶಾಸಕ ಎಲ್.ರವಿಸುಬ್ರಹ್ಮಣ್ಯ, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣ ಸ್ವಾಮಿ ಅವರು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದರು.
ಪೈಪೋಟಿ ನಡೆಯುತ್ತಿದೆ:
ಈ ವೇಳೆ ಮಾತನಾಡಿದ ಸದಾನಂದ ಗೌಡ,ಕಮಿಷನ್ ಹೊಡೆಯುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿದೆ ಎಂದು ಆಪಾದಿಸಿದರು.
ಕಳೆದ ಐದು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎತ್ತ ಸಾಗುತ್ತಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ. ಸಿಎಂ ಹಾಗೂ ಡಿಸಿಎಂ ನಡುವೆ ಕಮಿಷನ್ ಪಡೆಯುವುದರಲ್ಲಿ ಪೈಪೋಟಿ ಏರ್ಪಟ್ಟಿದೆ. ನಾನು ಹೆಚ್ಚು ಹೊಡೆಯಬೇಕು, ಅವರು ಹೆಚ್ಚು ಹೊಡೆಯಬೇಕೋ ಎಂದು ಸ್ಪರ್ಧೆಗಿಳಿದ್ದವರಂತೆ ವಸೂಲಿ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕಲೆಕ್ಷನ್ ಸರ್ಕಾರ ಮುಖ್ಯಸ್ಥ ಎಂದು ಟೀಕಾ ಪ್ರಹಾರ ನಡೆಸಿದರು.
ಐದು ತಿಂಗಳಿನಿಂದ ಸರ್ಕಾರದ ಆಡಳಿತ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಕಲೆಕ್ಷನ್ ಸರ್ಕಾರ ಎಂದು ನಾವು ಹೇಳುತ್ತಿಲ್ಲ. ಜನರೇ ಹಾದಿಬೀದಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ದೆಹಲಿಯು ಕಾಂಗ್ರೆಸ್ ಸರ್ಕಾರದ ಕಲೆಕ್ಷನ್ ಕೇಂದ್ರಬಿಂದು ಎಂದು ದೂರಿದರು.
ಕರ್ನಾಟಕದಲ್ಲಿ ವಸೂಲಿ ಮಾಡುವ ಕಮಿಷನ್ ಹಣದಲ್ಲಿ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಗೂ ಹೋಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಕಲೆಕ್ಷನ್ ಮಾಡಿ ಸುರ್ಜೆವಾಲಗೆ ನೀಡಿದರೆ ಶಿವಕುಮಾರ್ ವೇಣುಗೋಪಾಲ್‍ಗೆ ಕೊಡಬೇಕು, ಸಿಎಂ ಮತ್ತು ಡಿಸಿಎಂ ಬಣದ ಗುತ್ತಿಗೆದಾರರು ಕಮೀಷನ್ ಕಲೆಕ್ಷನ್‍ನ ಪ್ರಮುಖ ರೂವಾರಿಗಳೆಂದು ಆಪಾದಿಸಿದರು.
ಸಿನಿಮಾ ಪೋಸ್ಟರ್ ಥರ ಈ ಪೋಸ್ಟರ್‍ಗಳನ್ನು ಹಾಕುತ್ತೇವೆ. ರಾಜ್ಯದ ಹಣ ಕೊಳ್ಳೆ ಹೊಡೆಯುವವರ ವಿರುದ್ಧ ನಾವಿದ್ದೇವೆ. ಇದಕ್ಕೆ ಬೇಕಾದರೆ ನಮ್ಮನ್ನು ಐಟಿ ವಕ್ತಾರರು ಅಂದರೂ ಅದಕ್ಕೆ ನಾವು ಸ್ವಾಗತ ಎಂದರು.