ಬೆಂಗಳೂರು,ಜ.15- ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಯಾರು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ,ಯಾವ ಪಕ್ಷ ಎಷ್ಟು ಸ್ಥಾನಗಳಿಸಲಿದೆ ಎಂದು ಈಗಾಗಲೇ ಮತದಾರ ಪ್ರಭು ತನ್ನದೇ ಅದ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಇನ್ನೂ ರಾಜಕೀಯ ನಾಯಕರು ಕೂಡಾ ತಂತ್ರ,ಪ್ರತಿತಂತ್ರದಲ್ಲಿ ತೊಡಗಿದ್ದು, ಜೊತೆಯಲ್ಲಿ ತಮಗೆ ಯಾವ ಸಂಗತಿ ಅನುಕೂಲವಾಗಲಿದೆ,ಎಲ್ಲಿ ತಮಗೆ ತೊಡಕು ಎಂಬ ಬಗ್ಗೆ ಸಮೀಕ್ಷೆ ಮಾಡಿಸಿಕೊಂಡು ಅದನ್ನು ಸರಿಪಡಿಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ.
ಆಡಳಿತ ರೂಡ ಬಿಜೆಪಿ ಶತಾಯಗತಾಯ ಮತ್ತೆ ಅಧಿಕಾರ ಹಿಡಿಯಲೇಬೇಕು ಎಂದು ಪಣತೊಟ್ಟಿದ್ದು,ಇದಕ್ಕಾಗಿ ಎಲ್ಲಾ ಪ್ರಯತ್ನ ನಡೆಸಿದೆ.
ಆದರೆ ಇದಕ್ಕೆ ಸರ್ಕಾರದ ವಿರುದ್ಧ ಕೇಳಿಬಂದಿರುವ ಹಲವು ಆರೋಪಗಳು, ಆಡಳಿತ ವಿರೋಧಿ ಅಲೆ ತೊಡಕಾಗಿ ಪರಿಣಮಿಸಿದೆ. ಇದನ್ನು ಹಿಮ್ಮೆಟ್ಟಿಸಿ ಹೇಗೆ ಅಧಿಕಾರ ಹಿಡಿಯಬಹುದು ಎಂಬ ಬಗ್ಗೆ ಅಧ್ಯಯನ ನಡೆಸಿದ್ದು,ಕೇಂದ್ರ ನಾಯಕರು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಂಡರೆ ಪರಿಸ್ಥಿತಿ ಬದಲಾಗಬಹುದು ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ಅಮಿತ್ ಶಾ,ಮತ್ತು ಜೆ.ಪಿ.ನಡ್ಡಾ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ.
ಇತ್ತೀಚೆಗೆ ನಡೆದ ಅಮಿತ್ ಶಾ ಕಾರ್ಯಕ್ರಮ ಹಾಗೂ ಪ್ರಧಾನಿ ಮೋದಿ ಹುಬ್ಬಳ್ಳಿಯ ನಡೆಸಿದ ರೋಡ್ ಶೋ ಹಿನ್ನೆಲೆಯಲ್ಲಿ ದೆಹಲಿ ಮೂಲದ ಖಾಸಗಿ ಸಂಸ್ಥೆ ಆಂತರಿಕ ಸಮೀಕ್ಷೆಯೊಂದನ್ನು ನಡೆಸಿದ್ದು,ಇದರಲ್ಲಿ
ಬಿಜೆಪಿ ಇತರ ಎಲ್ಲಾ ಪಕ್ಷಗಳನ್ನು ಹಿಂದಿಕ್ಕಿ ಹೆಚ್ಚು ಸ್ಥಾನ ಗಳಿಸುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಹೇಳಿದೆ.
ಭಾರೀ ಜಿದ್ದಾಜಿದ್ದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಹೆಚ್ಚುಕಡಿಮೆ ಕಳೆದ ಬಾರಿಯಷ್ಟೇ ಸ್ಥಾನ ಗಳಿಸುವ ಸಾಧ್ಯತೆಯಿದೆ ಎಂದು ಆಂತರಿಕ ಸಮೀಕ್ಷೆ ಬಹಿರಂಗ ಪಡಿಸಿದೆ.
2018ರಲ್ಲಿ 104 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2023ರಲ್ಲೂ ಹೆಚ್ಚು ಕಡಿಮೆ ಅಷ್ಟೇ ಸ್ಥಾನವನ್ನು ಪಡೆಯಬಹುದೆಂದು ಎಂದು ಹೇಳಿದ್ದು, ಮಿಷನ್ 150 ಎಂಬ ಬಿಜೆಪಿಯ ಎಲ್ಲ ನಾಯಕರ ಆಶೆ ಈಡೇರುವುದು ಕಷ್ಟ ಎಂದಿದೆ.
ಆಡಳಿತ ವಿರೋಧಿ ಅಲೆ, ಸರ್ಕಾರದ ಮೇಲೆ ಬಂದಿರುವ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪಗಳು, ಸಮರ್ಥ ನಾಯಕತ್ವ ಕೊರತೆ ಆಂತರಿಕ ಗೊಂದಲ ಹೀಗೆ ಹತ್ತು ಹಲವು ಕಾರಣಗಳಿಂದ ಬಿಜೆಪಿ 104 ಸ್ಥಾನ ಮಾತ್ರ ಗಳಿಸಬಹುದು ಅದೂ ಕೂಡಾ ಪ್ರಧಾನಿ ಮೋದಿ,ಯೋಗಿ ಆದಿತ್ಯನಾಥ್ (Yogi Adityanath),ಯಡಿಯೂರಪ್ಪ, ಅಮಿತ್ ಶಾ ಹೆಚ್ಚು ಸಕ್ರಿಯವಾಗಿ ರಾಜ್ಯದಲ್ಲಿ ಸಂಚರಿಸಿದರೆ ಮಾತ್ರ ಸಾಧ್ಯ ಎಂದು ಹೇಳಿದೆ.
ರಾಜ್ಯದ ಜನತೆಗೆ ಬಿಜೆಪಿ ಬಗ್ಗೆ ಹೇಳಿಕೊಳ್ಳುವಂತಹ ಸದಾಭಿಪ್ರಾಯ ಇಲ್ಲ. ಆದರೆ ಪ್ರಧಾನಿ ನರೇಂದ್ರಮೋದಿಯವರ ವ್ಯಕ್ತಿತ್ವವೇ ಕಮಲ ನಾಯಕರಿಗೆ ಆಸರೆಯಾಗಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.
ರಾಜಧಾನಿ ಬೆಂಗಳೂರು, ಮೈಸೂರು ಕರ್ನಾಟಕ, ಕರಾವಳಿ, ಮಧ್ಯಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತೆ 5 ಭಾಗಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು.
ಸಮೀಕ್ಷೆಯಲ್ಲಿ ಬಹುತೇಕ ಮತದಾರರು ದೆಹಲಿ ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಕೇವಲ ಮತ ಗಳಿಕೆಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತದೆ. ಅವರಿಗಾದರೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಹಲವರು ಒತ್ತಾಯಿಸಿದ್ದಾರೆ.
2023ರ ಚುನಾವಣೆಯಲ್ಲಿ ಎಂದಿನಂತೆ ಭ್ರಷ್ಟಾಚಾರ, ಜಾತಿ, ಹಣಬಲವೇ ಮೇಳೈಸಲಿದ್ದು, ಬಿಜೆಪಿಗೆ ಭದ್ರ ಬುನಾದಿಯಾಗಿರುವ ವೀರಶೈವ ಲಿಂಗಾಯಿತ ಸಮುದಾಯ, ಹಿಂದುಳಿದ ಜಾತಿಗಳಲ್ಲಿ ಕೆಲವು ಸಣ್ಣಪುಟ್ಟ ಸಮುದಾಯಗಳು, ದಲಿತ ಸಮುದಾಯದಲ್ಲಿ ಎಡಗೈ ಕೈ ಹಿಡಿಯುವ ಸಾಧ್ಯತೆಯಿದೆ ಎಂದು ವರದಿ ನೀಡಿದೆ
ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಪ್ರಬಲವಾಗಿರುವ ವೀರಶೈವ ಲಿಂಗಾಯಿತರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಕೋಮು ದೃವೀಕರಣದಿಂದಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡಿನ ಚಿಕ್ಕಮಗಳೂರು ಹಾಗೂ ಮಡಿಕೇರಿಯಲ್ಲಿ ಬಿಜೆಪಿ ಪ್ರಾಬಲ್ಯ ಸಾಸುವ ಸಾಧ್ಯತೆ ಇದೆ.ಇದಕ್ಕಾಗಿ ಮೊನ್ನೆ ಹುಬ್ಬಳ್ಳಿಯಲ್ಲಿ ನಡೆಸಿದ ರೋಡ್ ಶೋ ಮಾದರಿಯಲ್ಲಿ ಪ್ರಧಾನಿ ಮೋದಿ ಕಲಬುರಗಿ, ಬೆಳಗಾವಿ, ವಿಜಯಪುರ, ದಾವಣಗೆರೆ, ಮೈಸೂರು, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕನಿಷ್ಟ ಮೂರು ಬಾರಿಯಾದರೂ ಮಾಡಬೇಕು ಎಂದು ಸಲಹೆ ಮಾಡಿದೆ.
ಮೋದಿ-ಯಡಿಯೂರಪ್ಪ ಆಸರೆ:
ಚುನಾವಣೆಯಲ್ಲಿ ಬಿಜೆಪಿಯನ್ನು ಪ್ರಧಾನಿ ನರೇಂದ್ರಮೋದಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ನಾಮಬಲವೇ ಕಮಲ ನಾಯಕರಿಗೆ ಆಸರೆಯಾಗಲಿದೆ ಎಂದಿದೆ
ಜೊತೆಗೆ ಈ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆಯೂ ಭಾರೀ ಸದಾಭಿಪ್ರಾಯ ವ್ಯಕ್ತವಾಗಿದ್ದು, ಅವರು ಪ್ರಚಾರ ಮಾಡಿದಷ್ಟೂ ಬಿಜೆಪಿಗೆ ಹೆಚ್ಚು ಅನುಕೂಲವಾಗಲಿದೆ ಎಂಬುದು ಮತದಾರರ ನಾಡಿಮಿಡಿತದಿಂದ ಗೊತ್ತಾಗಿದೆ.
ನರೇಂದ್ರಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಕಾರಣದಿಂದಾಗಿ ಬಿಜೆಪಿಗೆ ಮತ ಹಾಕುತ್ತೇವೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ನಾಯಕರು ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ. ಕುಟುಂಬ ರಾಜಕಾರಣವನ್ನು ಪ್ರೋತ್ಸಾಹಿಸುವುದಾಗಲಿ ಇಲ್ಲವೇ ಸ್ವಜನ ಪಕ್ಷಪಾತಕ್ಕೂ ಅವಕಾಶ ನೀಡುವುದಿಲ್ಲ. ನಮಗೆ ಬಿಜೆಪಿ ಬಗ್ಗೆ ಬೇಸರವಿದ್ದರೂ ಯೋಗಿ ಮತ್ತು ಮೋದಿ ಅವರ ಮುಖ ನೋಡಿಕೊಂಡು ಮತ ಹಾಕುತ್ತೇವೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಬಿಜೆಪಿ ಪ್ರತಿ ಚುನಾವಣೆಯಲ್ಲೂ ದೆಹಲಿ ಮೂಲದ ಸಂಸ್ಥೆಯಿಂದಲೇ ಸಮೀಕ್ಷೆ ನಡೆಸುತ್ತದೆ. 2018ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆಯಲ್ಲೂ ಈ ಸಂಸ್ಥೆಯಿಂದಲೇ ಸಮೀಕ್ಷೆ ನಡೆಸಲಾಗಿತ್ತು.
2018ರಲ್ಲಿ ಬಿಜೆಪಿ 105 ಸ್ಥಾನವನ್ನು ಗೆಲ್ಲಲಿದೆ ಎಂದು ಇದೇ ಸಂಸ್ಥೆ ಹೇಳಿತ್ತು. ಅಂತಿಮವಾಗಿ ಫಲಿತಾಂಶದಲ್ಲಿ 104 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು.
ಕರಾವಳಿ ಕರ್ನಾಟಕ, ಮುಂಬೈ-ಕರ್ನಾಟಕ,ಕಲ್ಯಾಣ-ಕರ್ನಾಟಕ ಮತ್ತು ಮಧ್ಯ ಕರ್ನಾಟಕದಂತಹ ಬಿಜೆಪಿಯ ಸಾಂಪ್ರದಾಯಿಕ ಬೆಂಬಲ ಪ್ರದೇಶಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ ಎಂದು ಸಮೀಕ್ಷೆ ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯೇತರ ಸಾಂಪ್ರದಾಯಿಕ ಜಿಲ್ಲೆಗಳಾದ ಬೆಂಗಳೂರು (Bangalore) ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಕೋಲಾರ, ಮೈಸೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಬಿಜೆಪಿ ಪ್ರಾಬಲ್ಯವಿದ್ದರೂ, ಈ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಿಸಲು ಸಮರ್ಥವಾಗಿಲ್ಲ, ಈ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಜೊತೆ ಬಿಜೆಪಿ ಹೋರಾಟ ನಡೆಸಬೇಕಿದೆ.
2008ರಿಂದ ಸಾಂಪ್ರಾದಾಯಿಕವಾಗಿ ಬಿಜೆಪಿ ಗೆಲ್ಲುತ್ತಿರುವ ಕ್ಷೇತ್ರಗಳಲ್ಲಿ ಆಡಳಿತ ವಿರೋ ಅಲೆಯಿಂದ ಈ ಶಾಸಕರಿಗೆ ಯಾವುದೇ ಹಾನಿಯಾಗುವುದಿಲ್ಲ ಎಂಬುದನ್ನು ಸಮೀಕ್ಷೆ ತಿಳಿಸಿದೆ. ಸದ್ಯ ಬಿಜೆಪಿ ಸರ್ಕಾರವು 104 ಬಿಜೆಪಿ ಸದಸ್ಯರನ್ನು ಹೊಂದಿದೆ.
ಕಾಂಗ್ರೆಸ್‍ನ 14 ಮತ್ತು ಜೆಡಿಎಸ್‍ನ ಮೂವರು ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡ ನಂತರ ಕೊರತೆಯಿದ್ದ 17 ಸ್ಥಾನವನ್ನು ತುಂಬಲಾಯಿತು.
ಈ ಎಲ್ಲಾ 17 ಕ್ಷೇತ್ರಗಳಲ್ಲಿ ಬಿಜೆಪಿ ಪರವಾಗಿ ಯಾವುದೇ ದೊಡ್ಡ ಅಲೆ ಇಲ್ಲ ಎಂದು ಸಮೀಕ್ಷೆ ತಿಳಿಸಿದೆ.
8 ತಿಂಗಳ ಹಿಂದೆ ನಡೆಸಿದ್ದ ಸಮೀಕ್ಷೆಯಲ್ಲಿ ಬಿಜೆಪಿ 70 ಸ್ಥಾನಗಳಿಂದ 40ಕ್ಕೆ ಇಳಿಯುತ್ತದೆ ಎಂದು ತಿಳಿಸಿತ್ತು, ಆದರೆ ಇತ್ತೀಚಿನ ಸಮೀಕ್ಷೆ ಪ್ರಕಾರ ಬಿಜೆಪಿ 104 ಸ್ಥಾನ ಗೆಲ್ಲಲು ಸಶಕ್ತವಾಗಿದೆ ಎಂದು ತಿಳಿಸಿದೆ.
ರಾಜ್ಯದ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಆಡಳಿತ ಪಕ್ಷದ ದೌರ್ಬಲ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
Previous Articleಸದ್ಗುರು Jaggi Vasudevಗೆ ತೀವ್ರ ಹಿನ್ನಡೆ?
Next Article ನಾ ನಾಯಕಿಯಲ್ಲಿ Priyanka Gandhi ಕಮಾಲ್