ಬೆಂಗಳೂರು,ಜು.26- ಈ ಹಿಂದೆ ರಾಜ್ಯದ ಕೆಲವು ಕಡೆ ನಡೆದ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಪೊಲೀಸರು ದಾಖಲಿಸಿದ್ದ ಪ್ರಕರಣಗಳ ಮರು ಪರಿಶೀಲನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ಇದು ಇದೀಗ ತೀವ್ರ ವಿವಾದವಾಗಿ ಪರಿಣಮಿಸಿದೆ.
ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ ಮತ್ತು ಹಬ್ಬಳ್ಳಿ ಸೇರಿದಂತೆ ಇತರೆಡೆ ನಡೆದ ಗಲಭೆ ಪ್ರತಿಭಟನೆ ಸಂಬಂದ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿದ್ದು, ಇಂತಹ ಪ್ರಕರಣಗಳನ್ನು ಪರಿಶೀಲನೆ ನಡೆಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಹಾಗೂ ಮೈಸೂರಿನ
ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೃಹ ಸಚಿವ ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ.
ತಮಗೆ ಪತ್ರ ಮುಖೇನ ಶಾಸಕ ತನ್ವೀರ್ ಸೇಠ್ ಮನವಿಯನ್ನು ಪರಿಶೀಲಿಸುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪರಮೇಶ್ವರ್ ಅವರು ಜುಲೈ 19ರಂದು ಪ್ರಧಾನ ಕಾರ್ಯದರ್ಶಿ ಕಾರಾಗೃಹಗಳು, ನಾಗರಿಕ ರಕ್ಷಣೆ ಮತ್ತು ಸಹಾಯಕ ಸೇವೆಗಳು (ಪಿಸಿಎಎಸ್), ಗೃಹ ಇಲಾಖೆಗೆ ಬರೆದ ಪತ್ರದಲ್ಲಿ ಶಾಸಕ ಮತ್ತು ಮಾಜಿ ಸಚಿವ ತನ್ವೀರ್ ಸೇಠ್ ಅವರ ಮನವಿ ಪತ್ರವನ್ನು ಉಲ್ಲೇಖಿಸಿ ಸೂಚನೆ ನೀಡಿದ್ದಾರೆ.
ಬಿಜೆಪಿ ತೀವ್ರ ಖಂಡನೆ:
ಸರ್ಕಾರದ ಈ ನಡೆ ಇದೀಗ ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಅಸ್ತ್ರವೊಂದು ಸಿಕ್ಕಿದಂತಾಗಿದೆ.ತನ್ವೀರ್ ಸೇಠ್ ಪತ್ರದ ಹಿನ್ನೆಲೆಯಲ್ಲಿ ಗೃಹ ಸಚಿವರು ನೀಡಿರುವ ಸೂಚನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಜ್ಯದ ಕಾಂಗ್ರೆಸ್ ಸರ್ಕಾರವು ‘ಒಂದು ಸಮುದಾಯದ ಕೋಮು ಅಪರಾಧಿಗಳಿಗೆ ಕ್ಲೀನ್ ಚಿಟ್ ನೀಡುವ ಮೂಲಕ, ಜಿಹಾದಿಗಳು ಮತ್ತು ಪಿಎಫ್‌ಐ ಭಯೋತ್ಪಾದಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ’ ಎಂದು ಕೆಂಡ ಕಾರಿದೆ.
ಒಂದು ಕೋಮಿನ ಮತೀಯವಾದಿ ಅಪರಾಧಿಗಳಿಗೆ ನಮ್ಮಲ್ಲಿ ಕ್ಲೀನ್ ಚಿಟ್ ನೀಡಲಾಗುವುದು ಎಂದು ಬೋರ್ಡ್ ಹಾಕಿಕೊಂಡು ಪರಮೇಶ್ವರ ಅವರು ಕಾರ್ಯನಿರ್ವಹಿಸುತ್ತಿರುವಂತಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿದೆಯೇ?. ಈ ಸರ್ಕಾರ ಜಿಹಾದಿಗಳ, ಪಿಎಫ್ಐ ಭಯೋತ್ಪಾದಕರ ತಾಳಕ್ಕೆ ಕುಣಿಯುತ್ತಿರುವುದನ್ನು ಈ ಪತ್ರ ಋುಜುವಾತು ಮಾಡಿದೆ ಎಂದು ಟ್ವೀಟ್ ಮಾಡಿದೆ.
ಕಾಂಗ್ರೆಸ್ ವಿರುದ್ಧ ಹೋರಾಟ:
ಜಿಹಾದಿ ಸರ್ಕಾರದ ಎಲ್ಲಾ ಬಗೆಯ ಹಿಂದೂ ವಿರೋಧಿ ನೀತಿ-ನಿಲುವುಗಳ ವಿರುದ್ಧ ಹೋರಾಟ ಮುಂದುವರೆಸಲಾಗುವುದು ಎಂದು ಟ್ವೀಟ್ ನಲ್ಲಿ ತಿಳಿಸಿದೆ.
ಕಾಂಗ್ರೆಸ್ ನೇತೃತ್ವದ ಸರಕಾರ ಜಿಹಾದಿಗಳ, ಪಿಎಫ್ಐ ಭಯೋತ್ಪಾದಕರ ತಾಳಕ್ಕೆ ಕುಣಿಯುತ್ತಿರುವುದು ಈ ಪತ್ರ ಋುಜುವಾತು ಪಡಿಸುತ್ತಿದೆ ಎಂದು ದೂರಿದೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯಲ್ಲಿನ ಗಲಭೆಕೋರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು ಅತ್ಯಂತ ಕೆಟ್ಟ ಘಟನೆಗಳಲ್ಲಿ ಒಂದಾಗಿದ್ದು, ‘ರಾಜ್ಯದಲ್ಲಿ ಗಲಭೆ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆಗಳಿಗೆ ಕಾರಣರಾದ ಪಿಎಫ್‌ಐ ಗೂಂಡಾಗಳ ವಿರುದ್ಧದ ಪ್ರಕರಣಗಳನ್ನು ಸಿದ್ದರಾಮಯ್ಯ 1.0 ಸರ್ಕಾರ ಹಿಂಪಡೆದಿದೆ.
ಗಲಭೆಕೋರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಕ್ರಮಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ ಅವರು ಗೃಹ ಕಾರ್ಯದರ್ಶಿಗೆ ಸೂಚಿಸಿದ್ದಾರೆ’ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ಕಾನೂನು ಬಾಹಿರ ಕ್ರಮ:
ಕೆಜಿ ಹಳ್ಳಿ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಮೇಲೆ ನಡೆದ ಗೂಂಡಾ ದಾಳಿ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ಕೈ ಬಿಡುವಂತೆ ಸೂಚಿಸಿರುವುದು ಸಂಪೂರ್ಣ ಕಾನೂನು ಬಾಹಿರ ಎಂದು ಶಾಸಕ ಸುನೀಲ್ ಕುಮಾರ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.
ಡಾ.ಜಿ.ಪರಮೇಶ್ವರ ಅವರು ಪೊಲೀಸ್ ಇಲಾಖೆಗೆ ಬರೆದ ಪತ್ರ ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ. ಸರ್ಕಾರ ಮುಸ್ಲಿಂ ಓಲೈಕೆಗಾಗಿ ಸಂವಿಧಾನಬಾಹಿರವಾಗಿ ವರ್ತಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕರ್ನಾಟಕದ ಪೊಲೀಸರು ಆಳುವ ಸರ್ಕಾರದ ಆಳುಗಳಂತೆ ವರ್ತಿಸುವುದಕ್ಕೆ ಮುನ್ನ ಆ ದಿನ ನಡೆದ ಭೀಬತ್ಸ ಘಟನೆಯನ್ನು ನೆನಪು ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ