ಬೆಂಗಳೂರು, ಫೆ.29 – ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಸಮುದಾಯಗಳನ್ನು ಒಲೈಸುವ ರೀತಿಯಲ್ಲಿ ಸಿದ್ದಪಡಿಸಿರುವ ಜಾತಿ ಗಣತಿ ವರದಿ ಎಂದು ಕರೆಯಲ್ಪಡುವ ಸಾಮಾಜಿಕ-ಆರ್ಥಿಕ ಹಾಗೂ ಶಿಕ್ಷಣ ಸಮೀಕ್ಷೆ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ರಾಜ್ಯದ ವಿವಿಧ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಹಾಗೂ ಶಿಫಾರಸುಗಳನ್ನು ಒಳಗೊಂಡ 200 ಪುಟಗಳ ಪ್ರಧಾನ ವರದಿ ಹಾಗೂ 48 ಸಂಪುಟಗಳಷ್ಟಿರುವ ದತ್ತಾಂಶದ ವಿವರಗಳನ್ನು ಒಳಗೊಂಡಿದೆ.
ವರದಿಯಲ್ಲಿ ಒಟ್ಟು 13 ಪ್ರತಿಗಳಿದ್ದು, ಅವುಗಳಲ್ಲಿ ಈ ಕೆಳಗಿನ ಪ್ರಮುಖ ಅಂಶಗಳಿವೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಸಮಗ್ರ ರಾಜ್ಯ ವರದಿ
ಜಾತಿವಾರು ಜನಸಂಖ್ಯೆ ವಿವರ – 1 ಸಂಪುಟ
ಜಾತಿ / ವರ್ಗಗಳ ಲಕ್ಷಣಗಳು( ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನ ಹೊರತುಪಡಿಸಿ)
ಜಾತಿ / ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಜಾತಿಗಳು)
ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಪಂಗಡಗಳು)
ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ-ಅಂಶಗಳು (ಎರಡು ಸಿಡಿಗಳು)
ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ 201 ರ ದತ್ತಾಂಶಗಳ ಅಧ್ಯಯನ ವರದಿ-2024 ಒಳಗೊಂಡಿದೆ.
ವರದಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸ್ವೀಕರಿಸಿದ ವರದಿಯನ್ನು ಸಚಿವ ಸಂಪುಟದ ಮುಂದಿಟ್ಟು ಚರ್ಚಿಸಿ ತೀರ್ಮಾನ ಮಾಡುತ್ತೇವೆ’ ಎಂದು ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡಿದ ಜಯಪ್ರಕಾಶ ಹೆಗಡೆ ‘ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದೇವೆ. ಮುಂದೆ ಏನು ಮಾಡಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ’ ಎಂದಷ್ಟೇ ಹೇಳಿದರು.