ಬೆಂಗಳೂರು, ಜ.31: ಲೋಕಸಭೆ ಚುನಾವಣೆ ಸನಿಹವಾಗುತ್ತಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿವೆ.
ಬಹುತೇಕ ಹಾಲಿ ಸಂಸದರು ಮರು ಆಯ್ಕೆ ಬಯಸಿದ್ದು ಪಕ್ಷದ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಸೋಲುವ ಭೀತಿಯಿಂದ ಕೇಂದ್ರ ಮಂತ್ರಿಯೊಬ್ಬರು ಸಕ್ರಿಯ ರಾಜಕಾರಣದಿಂದ ದೂರ ಸರಿಯಲು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.
ಚಿತ್ರದುರ್ಗ (Chitradurga) ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ ನಾರಾಯಣಸ್ವಾಮಿ ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಇವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಿ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಇಲಾಖೆಯಲ್ಲಿ ಅತ್ಯುತ್ತಮ ಕೆಲಸ ಮಾಡುವ ಮೂಲಕ ಕ್ರಿಯಾಶೀಲ ಮಂತ್ರಿ ಎಂದೆ ಖ್ಯಾತಿ ಪಡೆದಿದ್ದರು.
ಇವರ ಕಾರ್ಯಶೀಲತೆಯನ್ನು ಮೆಚ್ಚಿದ ನಾಯಕತ್ವ ಇವರಿಗೆ ರಾಜ್ಯ ಬಿಜೆಪಿಯ ನಾಯಕತ್ವದ ಪಟ್ಟ ಕಟ್ಟಲು ಚಿಂತನೆ ನಡೆಸಿತ್ತು. ಆದರೆ, ಜಾತಿವಾರು ಲೆಕ್ಕಾಚಾರ ಮಾಡಿದ ಹೈಕಮಾಂಡ್ ಈ ಪ್ರಸ್ತಾಪ ಕೈಬಿಟ್ಟಿತ್ತು.
ಹೈಕಮಾಂಡ್ ವಿಶ್ವಾಸಗಳಿಸಿದ ನಾರಾಯಣಸ್ವಾಮಿ ಕ್ಷೇತ್ರದಲ್ಲಿ ಮಾತ್ರ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಹೊರವಲಯದ ಆನೇಕಲ್ ನಿವಾಸಿಯಾದ ನಾರಾಯಣಸ್ವಾಮಿ ಅವರಿಗೆ ಚಿತ್ರದುರ್ಗದ ಜೊತೆ ಸಂಪರ್ಕ ಕಡಿಮೆ. ಹೀಗಿದ್ದರೂ ಹೈಕಮಾಂಡ್ ಹಲವಾರು ಲೆಕ್ಕಾಚಾರ ಮಾಡಿ ಚಿತ್ರದುರ್ಗ ಕ್ಷೇತ್ರದಿಂದ ಕಣಕ್ಕಿಳಿಸಿತು.ಬಿಜೆಪಿ ಅಭ್ಯರ್ಥಿ ಎಂಬ ಕಾರಣಕ್ಕೆ ಎಲ್ಲಾ ರೀತಿಯ ಶ್ರಮಹಾಕಿ ಅವರನ್ನು ಗೆಲ್ಲಿಸಲಾಯಿತು.ಆದರೆ ಗೆದ್ದ ನಂತರ ಅವರು ಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಕಡೆ ಗಮನ ಕೊಡಲಿಲ್ಲ ಎಂದು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅದರಲ್ಲೂ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಕೇಂದ್ರ ಮಂತ್ರಿಯಾಗಿ ನಾರಾಯಣಸ್ವಾಮಿ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಯಾವುದೇ ಪ್ರಯತ್ನ ನಡೆಸಲಿಲ್ಲ ಎಂದು ಸೋತ ಅಭ್ಯರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ. ಪ್ರಮುಖವಾಗಿ ಜಿಲ್ಲೆಯಲ್ಲಿ ಗೆದ್ದಿರುವ ಏಕೈಕ ಅಭ್ಯರ್ಥಿ ಹೊಳಲ್ಕೆರೆ ಚಂದ್ರಪ್ಪ ಸೋತಿರುವ ತಿಪ್ಪಾರೆಡ್ಡಿ,ತಿಪ್ಪೇಸ್ವಾಮಿ, ರಾಜೇಶ್ ಗೌಡ ಗೂಳಿಹಟ್ಟಿ ಶೇಖರ್ ಸೇರಿದಂತೆ ಹಲವರು ನಾರಾಯಣಸ್ವಾಮಿ ನಾಯಕತ್ವದ ವಿರುದ್ಧ ಸಿಡಿದೆದಿದ್ದಾರೆ ಎಂದು ಗೊತ್ತಾಗಿದೆ.
ಕ್ಷೇತ್ರದಲ್ಲಿ ಇವರ ಸಮುದಾಯಕ್ಕೆ ಸೇರಿದ ಮತದಾರರ ಪ್ರಮಾಣ ಗಣನೀಯ ಸಂಖ್ಯೆಯಲ್ಲಿದ್ದರೂ,ಚುನಾವಣೆ ಸಮಯದಲ್ಲಿ ಈ ಮತಗಳನ್ನು ಬಿಜೆಪಿಗೆ ಸೆಳೆಯಲು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಪಕ್ಷದ ವರಿಷ್ಠರಿಗೆ ಯಾವುದೇ ಕಾರಣಕ್ಕೂ ಈ ಬಾರಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಕೊಡಬೇಡಿ ಮತ್ತೆ ಅವರು ಕಣಕ್ಕಿಳಿದಿದ್ದೆ ಆದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ ಎಂದು ಮನವಿ ಮಾಡಿದ್ದು ಪಕ್ಷದ ನಾಯಕತ್ವ ಅಭ್ಯರ್ಥಿ ಬದಲಾವಣೆಯಚಿಂತನೆ ಆರಂಭಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಒಂದು ವೇಳೆ ಪಕ್ಷ ಟಿಕೆಟ್ ನಿರಾಕರಿಸಿದರೆ ಅನಗತ್ಯವಾಗಿ ಮುಜುಗರಕ್ಕೀಡಾಗಬಹುದು ಎಂದು ಭಾವಿಸಿರುವ ನಾರಾಯಣಸ್ವಾಮಿ ಇದೀಗ ಚುನಾವಣೆ ರಾಜಕಾರಣದಿಂದ ನಿವೃತ್ತಿಯಾಗುವ ಚಿಂತನೆ ಆರಂಭಿಸಿದ್ದಾರೆ ಈ ಕುರಿತಂತೆ ತಮ್ಮ ಬೆಂಬಲಿಗರು ಮತ್ತು ಆಪ್ತರೊಂದಿಗೆ ಸಮಾಲೋಚನೆ ನಡೆಸಿರುವ ಅವರು ಸದ್ಯದಲ್ಲೇ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.