ಬೆಂಗಳೂರು,ಜ.27- GST ತೆರಿಗೆ ಕಟ್ಟಬೇಕೆಂದು ಹೇಳಿ ಖಾಸಗಿ ಕಂಪನಿಗೆ 9 ಕೋಟಿ 60 ಲಕ್ಷ ರೂ. ವಂಚಿಸಿರುವ ಇಬ್ಬರು ಖತರ್ನಾಕ್ ಖದೀಮರನ್ನು ಸಂಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಿಖಿಲ್ ಹಾಗೂ ವಿನಯ್ ಬಾಬು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 3 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಶೋಕಿಗೆ ಕೋಟ್ಯಂತರ ಹಣ ಖರ್ಚುಮಾಡಿದ್ದು, ಆರೋಪಿ ವಿನಯ್ ಬಾಬು ಅಪಾರ್ಟ್ಮೆಂಟ್ಗಳಲ್ಲಿ ಫ್ಲ್ಯಾಟ್ ಖರೀದಿಸಿರುವುದು ಪತ್ತೆಯಾಗಿದೆ.
ಬಂಧಿತ ಆರೋಪಿಗಳು ಕೊರಿಯಾ ಮೂಲದ ಟರ್ಮಿನಸ್ ಡೆಚಾಂಗ್ ಸೀಟ್ (TERMINUS DAECHANG SEAT COMPANY) ಎಂಬ ಆಟೋಮೋಟಿವ್ ಖಾಸಗಿ ಕಂಪನಿಗೆ ಅಸೋಸಿಯೇಟ್ ಚಾರ್ಟರ್ಡ್ ಅಕೌಂಟೆಂಟ್ (CA) ಆಗಿ ಸೇರಿಕೊಂಡಿದ್ದರು. ಕಂಪನಿಯ ವಿಶ್ವಾಸ ಗಳಿಸಿ GST ತೆರಿಗೆ ಕಟ್ಟಬೇಕೆಂದು ಕಂಪನಿ ಮಾಲೀಕರ ಬಳಿ ಸುಮಾರು 9 ಕೋಟಿ 60 ಲಕ್ಷ ಹಣವನ್ನು ಹಂತ ಹಂತವಾಗಿ ಪಡೆದಿದ್ದಾರೆ. ಕಂಪನಿಯ ಆಂತರಿಕ ಲೆಕ್ಕಪರಿಶೋಧನೆ ವರದಿಯನ್ನು ನೀಡಿದ್ದ ಆರೋಪಿ ನಿಖಿಲ್, 9 ಕೋಟಿಗೂ ಹೆಚ್ಚು GST ಕಟ್ಟಬೇಕೆಂದು ವರದಿ ನೀಡಿದ್ದ. ನಿಖಿಲ್ ವರದಿ ಅನ್ವಯ ಹಂತ ಹಂತವಾಗಿ ಮಾಲೀಕರು GST ಕಟ್ಟಿದ್ದರು. ಬಳಿಕ ತಾವು ಮೋಸ ಹೋಗಿರುವುದು ತಿಳಿದು ಬಂದಿತ್ತು.
ಈ ಬಗ್ಗೆ ಸತ್ಯ ಗೊತ್ತಾಗುತ್ತಿದ್ದಂತೆ ಮಾಲೀಕರು ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ನಂತರ ಆರೋಪಿಗಳು ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ವಂಚನೆಯ ಪ್ರಕರಣವನ್ನು ಸದಾಶಿವನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಇನ್ನು ಪ್ರಕರಣ ದಾಖಲಿಸಿಕೊಂಡಿದ್ದ ಸಂಜಯನಗರ ಪೊಲೀಸರು ನಿಖಿಲ್, ವಿನಯ್ ಬಾಬು ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮತ್ತಿಬ್ಬರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.