ಬೆಂಗಳೂರು,ಫೆ.2-
‘ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಜನಪರ, ಅಭಿವೃದ್ಧಿ ಪರ ಹಾಗೂ ಸರ್ವರಿಗೂ ಸಮಪಾಲು ನೀಡುವ ಬಜೆಟ್ ಆಗಿದ್ದು, ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಪಾದಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಬಾರಿ ಬಜೆಟ್ನಲ್ಲಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಗ್ರಾಮಗಳಲ್ಲಿ ಮನೆ ಕಟ್ಟಲು ಹೆಚ್ಚಿನ ಅನುದಾನ ನೀಡಲಾಗಿದೆ. 2024-25 ನೇ ಸಾಲಿನ ಕುಡಿಯುವ ನೀರು ಕೊಡುವ ಗುರಿಗೆ ಪೂರಕವಾಗಿ ಅನುದಾನ ಹೆಚ್ಚಿಸಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, 3 ಕೋಟಿ ರೂ.ವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ’ ಎಂದು ಶ್ಲಾಘಿಸಿದರು.
‘ಕೃಷಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಸಹಾಯ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನೀಡಲಾಗಿದೆ. ನಿಜಲಿಂಗಪ್ಪ ಕಾಲದಲ್ಲಿ ಭದ್ರಾ ಮೇಲ್ದಂಡೆ ಆಗಬೇಕು ಎಂಬುದು ಇತ್ತು. ಆವಾಗಿನಿಂದ 40 ವರ್ಷ ಕಳೆದರೂ ಯಾವ ಸರ್ಕಾರವೂ ಏನೂ ಮಾಡಿಲ್ಲ. ನಾವು ಬಂದ ಮೇಲೆ ಯೋಜನೆ ಬಗ್ಗೆ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಹೇಳಿದರು. ‘ರಾಷ್ಟ್ರೀಯ ಯೋಜನೆ ಸಂಬಂಧಿಸಿದಂತೆ ಈಗ ಎಲ್ಲವೂ ಅನುಮೋದನೆ ಆಗಿದೆ. UPA ಸರ್ಕಾರ ಇದ್ದಾಗ ಸಮಗ್ರ ನೀರಾವರಿ ಯೋಜನೆ ಘೋಷಣೆ ಮಾಡಲಾಗಿತ್ತು. 2012ರಲ್ಲಿ 500 ಕೋಟಿ ರೂ. ಖರ್ಚು ಮಾಡಿದರೆ ಮಾತ್ರ ಅನುದಾನ ಕೊಡಲಾಗುತ್ತದೆ ಎಂದಿದ್ದರು. ಹಾಗಾಗಿ ಅನುದಾನವೇ ಬರುತ್ತಿರಲಿಲ್ಲ. NDA ಸರ್ಕಾರ ಬಂದ ಬಳಿಕ ಆ ಷರತ್ತು ತೆಗೆದು ಹಾಕಲಾಗಿದ್ದು ಈಗ ಯಾವುದೇ ಷರತ್ತಿಲ್ಲದೆ 5,300 ಕೋಟಿ ಬರುತ್ತಿದೆ’ ಎಂದು ತಿಳಿಸಿದರು.
‘ಈ ಘೋಷಣೆಯನ್ನು ನಾವು ಸ್ವಾಗತ ಮಾಡಬೇಕು. ಆದರೆ ಅದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ. 5300 ಕೋಟಿ ರೂ. ಬಂದಿದೆ ಎಂದು ಪ್ರತಿಪಕ್ಷಗಳಿಗೆ ನಿರಾಸೆಯಾಗಿದೆ. ಅದಕ್ಕಾಗಿ ಪ್ರತಿಪಕ್ಷ ವಿರೋಧ ಮಾಡುತ್ತಿದೆ’ ಎಂದರು. ‘ನಗರಾಭಿವೃದ್ಧಿ ಇಲಾಖೆಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಎಲ್ಲಾ ಸರ್ಕಾರಗಳಲ್ಲೂ ಕರ್ನಾಟಕಕ್ಕೆ ಪಾಲು ಬರಲಿದೆ. ಭದ್ರ ಬುನಾದಿ ಹಾಕುವ ಎಲ್ಲಾ ಅಂಶ ಬಜೆಟ್ನಲ್ಲಿ ಇದೆ. ಆರ್ಥಿಕ ಸುಧಾರಣೆಗೆ ಕೇಂದ್ರ ಬಜೆಟ್ ನಲ್ಲಿ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಎಲ್ಲಾ ರಂಗದಲ್ಲಿ ಯೋಚನೆ ಮಾಡಿ ಸಮಗ್ರ ಅಭಿವೃದ್ದಿಗಾಗಿ, ಮೈಕ್ರೋ ಲೆವೆಲ್, ಮ್ಯಾಕ್ರೋ ಲೆವೆಲ್ಗೆ, ಸಮತೋಲಿತ, ಅತ್ಯಂತ ಪ್ರಗತಿಪರ, ಸರ್ವ ಸ್ಪರ್ಶಿ, ಸರ್ವ ವ್ಯಾಪ್ತಿ ಎಲ್ಲರಿಗೂ ಸಹಾಯ ಮಾಡುವ ಬಜೆಟ್ ಇದಾಗಿದೆ’ ಎಂದು ಹೇಳಿದರು.
‘ನರೇಗಾಗೆ ಬರಬೇಕಾದ ಹಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯತ್ಯಾಸ ಆಗಿಲ್ಲ. ಗ್ರಾಮೀಣ ಪ್ರದೇಶದ ಆಸ್ತಿ ಸೃಜನೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ವಸತಿ, ಕೃಷಿಗೆ, ನಗರಾಭಿವೃದ್ಧಿಗೆ, ಗ್ರಾಮೀಣಾಭಿವೃದ್ಧಿಗೆ ಅನುದಾನ ಬಂದಿದೆ. ಎಲ್ಲೆಲ್ಲಿ ನಿರೀಕ್ಷೆ ಇತ್ತೋ ಅಲ್ಲೆಲ್ಲ ಅನುದಾನ ಬಂದಿದೆ’ ಎಂದು ತಿಳಿಸಿದರು.