ಬೆಂಗಳೂರು, ಫೆ.17-
ಪ್ರಸಕ್ತ ಸರ್ಕಾರದ ಹಣಕಾಸು ಮಂತ್ರಿಯಾಗಿ ತಮ್ಮ ಕೊನೆಯ ಬಜೆಟ್ ಮಂಡಿಸಲು ಸಜ್ಜಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ದಾಖಲೆಯ ಮೂರು ಲಕ್ಷ ಕೋಟಿ ಗಾತ್ರದ ಆಯವ್ಯಯ (Budget) ಮಂಡಿಸಲಿದ್ದಾರೆ. ಕೋವಿಡ್ ನಂತರದಲ್ಲಿ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಂಡಿದ್ದು, ಬೊಕ್ಕಸಕ್ಕೆ ಅವಧಿಗೂ ಮೊದಲೇ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹವಾಗಿದೆ. ಇದು ಹಣಕಾಸು ಮಂತ್ರಿಗೆ ಹೊಸ ಉತ್ಸಾಹ ತಂದುಕೊಟ್ಟಿದೆ. ಕಳೆದ ಬಾರಿ 2,65,720 ಕೋಟಿ ರೂ. ಬಜೆಟ್ ಮಂಡನೆ ಮಾಡಿದ್ದ ಬೊಮ್ಮಾಯಿ ಅವರು, ಮೊದಲ ಬಾರಿಗೆ 3 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
2022-23 ಸಾಲಿನಲ್ಲಿ 77,010 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸುವ ಅಂದಾಜು ಮಾಡಲಾಗಿದೆ. ಕಳೆದ 9 ತಿಂಗಳಲ್ಲಿ 60,000 ಸಾವಿರ ಕೋಟಿಗೂ ಅಧಿಕ ವಾಣಿಜ್ಯ ತೆರಿಗೆ ಸಂಗ್ರಹವಾಗಿದ್ದು, ಮಾರ್ಚ್ ತಿಂಗಳ ಅಂತ್ಯಕ್ಕೆ 70 ಸಾವಿರ ಕೋಟಿ ದಾಟಲಿದೆ ಎನ್ನಲಾಗಿದೆ.
ಅಬಕಾರಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಏಪ್ರಿಲ್ 2022 ರಿಂದ ಜನವರಿ 2023ರ ವರೆಗೆ 24,724.27 ಕೋಟಿ ರೂ. ಸಂಗ್ರಹವಾಗಿದೆ, ಇದು 29,000 ಕೋಟಿ ರೂ.ಗಳ ಆದಾಯದ ಗುರಿಯ ಶೇ.85.26 ರಷ್ಟಿದೆ. ಕಳೆದ 2021-22ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ರಾಜ್ಯ ಅಬಕಾರಿಯು 21,549.94 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
ಈ ರೀತಿಯಲ್ಲಿ ಬಹುತೇಕ ಎಲ್ಲಾ ವಲಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಚುನಾವಣೆ ಮೇಲೆ ಕಣ್ಣಿಟ್ಟಿದ್ದು,ಮತದಾರರನ್ನು ಓಲೈಸಲು ಹಲವು ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ.
ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ನೀರಾವರಿ ಯೋಜನೆಗಳತ್ತ ಹೆಚ್ಚಿನ ಗಮನ ಹರಿಸಲಿದ್ದಾರೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಯೋಜನೆಗಳನ್ನು ಅವರು ಘೋಷಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಬಡವರು, ಮಹಿಳೆಯರು ಹಾಗೂ ರೈತರನ್ನು ಕೇಂದ್ರೀಕರಿಸಿ ಹೊಸ ಯೋಜನೆಗಳನ್ನು ಘೋಷಿಸಲು ಸಜ್ಜಾಗಿರುವ ಸಿಎಂ, ರೈತರಿಗೆ ಡೀಸೆಲ್ ಸಹಾಯಧನ ವಿಸ್ತರಿಸುವ ಘೋಷಣೆ ಮಾಡಲಿದ್ದಾರೆ. ಸಾಂಪ್ರದಾಯಿಕ ವೃತ್ತಿ ಮಾಡಲು ಇಚ್ಚಿಸುವವರಿಗೆ 50,000 ರೂ. ಧನಸಹಾಯ ನೀಡಲು ಚಿಂತನೆ ನಡೆಸಿದ್ದಾರೆ. ಈ ಮೂಲಕ ಗ್ರಾಮೀಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯೋಜನೆ ರೂಪಿಸಲಿದ್ದಾರೆ ಎನ್ನಲಾಗಿದ್ದು, ಉಳಿದಂತೆ ನೀರಾವರಿ ಯೋಜನೆಗಳಿಗೆ ಭರ್ಜರಿ ಅನುದಾನ ಬಿಡುಗಡೆ ಮಾಡಲಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕೃತ ಏಳನೇ ವೇತನ ಆಯೋಗ ರಚನೆಯಾಗಿರುವ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸುವ ಸಾಧ್ಯತೆಯಿದೆ.
ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 25 ಸಾವಿರ ಹುದ್ದೆ ಭರ್ತಿ ಮಾಡುವ ಘೋಷಣೆ, ಗಡಿ ಅಭಿವೃದ್ಧಿಗೆ ವಿಶೇಷ ಅನುದಾನ, ಪ್ರವಾಸೋದ್ಯಮ, ಬಿದರಿ ಕಲೆಗೆ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಲಿದ್ದಾರೆ ಎಂದು ಗೊತ್ತಾಗಿದೆ.
ಭದ್ರಾ ಮೇಲ್ದಂಡೆ ಯೋಜನೆ (Upper Bhadra Project), ಕೃಷ್ಣಾ ಮೇಲ್ದಂಡೆ ಯೋಜನೆ (Upper Krishna Project), ಮಹದಾಯಿ, ಮೇಕೆದಾಟು ಯೋಜನೆ (Mahadayi and Mekedatu projects) ಗಳಿಗೆ ಹೆಚ್ಚಿನ ಅನುದಾನ ಘೋಷಿಸುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಘೋಷಣೆ ಮಾಡುವ ಸಾಧ್ಯತೆಯಿದೆ.
ಹಂಪಿ, ಮೈಸೂರು ಟೂರಿಸಂ ಕ್ಲಸ್ಟರ್, ಪಟ್ಟದಕಲ್ಲು ಪ್ರವಾಸಿ ಪ್ಲಾಜ ನಿರ್ಮಾಣ, ಘಟಪ್ರಭಾ ನದಿ ಹಿನ್ನೀರಿನಲ್ಲಿ ಜಲಸಾರಿಗೆ ಯೋಜನೆಗೆ ಅನುದಾನ,ಆಲಮಟ್ಟಿ ಡ್ಯಾಂ ಎತ್ತರ, ಕೃಷ್ಣಾ ರಾಷ್ಟ್ರೀಯ ಯೋಜನೆ ಘೋಷಣೆ, ಪುನರ್ವಸತಿ ಹಾಗೂ ಪುನರ್ನಿರ್ಮಾಣ ಕಾರ್ಯಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಸಾಧ್ಯತೆ ಇದೆ.
ಹುಬ್ಬಳ್ಳಿ ಧಾರವಾಡದಲ್ಲಿ ಮೆಟ್ರೋ (Hubballi-Dharwad Metro) ಆರಂಭಕ್ಕೆ ಅನುದಾನ ಪ್ರಕಟಿಸುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಿ ಬಹುಬೇಡಿಕೆಯಂತೆ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (super-speciality hospital, Kumta) ನಿರ್ಮಾಣ ಘೋಷಣೆ ಸಂಭವವಿದೆ.
ಮಧ್ಯ ಕರ್ನಾಟಕದ ಹೃದಯ ಭಾಗವಾದ ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಘೋಷಣೆ, ಚಿತ್ರದುರ್ಗದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿಗೆ ಅನುದಾನ, ದಾವಣಗೆರೆ-ಚಿತ್ರದುರ್ಗ – ತುಮಕೂರು ನೇರ ರೈಲ್ವೆ ಮಾರ್ಗದ ಭೂಸ್ವಾಧೀನಕ್ಕೆ ಬಾಕಿ ಇರುವ ಅನುದಾನ ಬಿಡುಗಡೆಯ ಘೋಷಣೆ ಇರಲಿದೆ.
ಬೆಂಗಳೂರು ನಗರಕ್ಕೆ ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ, ತುಮಕೂರು ರಸ್ತೆ ಮೇಲ್ಸೇತುವೆ ಸಮಸ್ಯೆಗೆ ಪರಿಹಾರ, ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಹೊಸ ಯೋಜನೆ, ಕೇಂದ್ರದ ಸಲಹೆಯಂತೆ ಒಂದೇ ಮಾರ್ಗದಲ್ಲಿ ವಾಹನಗಳು, ರೈಲು, Metro ಸಂಚಾರಕ್ಕೆ ಯೋಜನೆ ರೂಪಿಸಲು ಅನುದಾನ, ಉಪನಗರ ರೈಲು ಯೋಜನೆಗೆ ಹಣ ಬಿಡುಗಡೆ, ಮೆಟ್ರೋಗೆ ಭೂಸ್ವಾಧೀನ, BBMP ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ನೀರು, ರಸ್ತೆ, ಬೀದಿ ದೀಪ, ಒಳಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಗಳನ್ನು ಕಲ್ಪಿಸಲು ಅನುದಾನ, ಮಳೆ ಅನಾಹುತ ತಡೆಗೆ ರಾಜಕಾಲುವೆಗಳ ವ್ಯವಸ್ಥಿತ ನಿರ್ವಹಣೆಗೆ ಅನುದಾನ, ರಸ್ತೆಗುಂಡಿ ಸಮಸ್ಯೆ ತಪ್ಪಿಸಲು ವೈಟ್ ಟಾಪಿಂಗ್ ಯೋಜನೆ ಘೋಷಿಸಿ ಅನುದಾನ ಪ್ರಕಟಿಸುವ ಸಾಧ್ಯತೆ ಇದೆ.