ಬೆಂಗಳೂರು,ಫೆ.3-
ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿಂದಲೇ ಮತಬೇಟೆ ಆರಂಭಿಸಿರುವ Congress ನಾಯಕರು ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಯನ್ನು ಆರಂಭಿಸಿದ್ದಾರೆ. ರಾಜ್ಯದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಪ್ರತ್ಯೇಕ ರಣಕಹಳೆ ಮೊಳಗಿಸಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಫೆಬ್ರವರಿ 13ರವರೆಗೆ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಯಾತ್ರೆ ನಡೆಸಲಿದ್ದಾರೆ. ಇದರ ಅಂಗವಾಗಿ ಜಗಜ್ಯೋತಿ ಬಸವೇಶ್ವರರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ ಭೇಟಿ ನೀಡಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
ಮತ್ತೊಂದೆಡೆ KPCC ಅಧ್ಯಕ್ಷ D.K Shivakumar ಅವರು ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಿಂದ ಆರಂಭಿಸಿದ್ದಾರೆ. ಇಲ್ಲಿನ ಪ್ರಸಿದ್ಧ ಕುರುಡುಮಲೆಯಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಡಿ.ಕೆ.ಶಿವಕುಮಾರ್ ತಂಡದ ಯಾತ್ರೆ ಆರಂಭಗೊಂಡಿದೆ. ಇದು ಕೋಲಾರ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಚರಿಸಲಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್,ಮುಂದಿನ 50 ದಿನಗಳ ನಂತರ BJP ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಎರಡು – ಮೂರು ಸಮೀಕ್ಷೆ ಗಳನ್ನು ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 136 ಶಾಸಕರು ಗೆಲ್ಲುವುದು ಖಚಿತ’ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ರಾಮನಗರ ಹಾಗೂ ಬೀದರ್ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಮುಕ್ತಾಯಗೊಳಿಸಿದ್ದೇವೆ. ನಿರೀಕ್ಷೆಗಿಂತ ಎರಡು ಪಟ್ಟು ಜನ ಭಾಗವಹಿಸಿ ಬೆಂಬಲ ನೀಡಿದ್ದಾರೆ. ಹಾಸನ ಮತ್ತು ಮಂಡ್ಯದಲ್ಲಿ ನಮ್ಮ ಪಕ್ಷದ ಒಬ್ಬ ಶಾಸಕ ಇಲ್ಲದಿದ್ದರೂ ನಿರೀಕ್ಷೆಗೂ ಮೀರಿ ಜನ ಸೇರಿದ್ದರು’ ಎಂದರು.