ಬೆಂಗಳೂರು.
‘ಚುನಾವಣೆ ಸಮೀಪಿಸುತ್ತಿರುವಂತೆ ಹಣ ಮಾಡುವ ಹಪಾಹಪಿಗೆ ಬಿದ್ದಿರುವ BJP ರಾಜ್ಯ ಸರ್ಕಾರದ ಮೂಲಕ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನೀರಾವರಿ ಇಲಾಖೆ (Irrigation Department) ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಸುತ್ತಿದೆ’ ಎಂದು Congress ಆಪಾದಿಸಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ (Randeep Singh Surjewala) ಜೊತೆಗೆ ಸುದ್ದಿಗೋಷ್ಠಿ ನಡೆಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar), ‘ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಎದ್ವಾತದ್ವಾ ಲೂಟಿ ಮಾಡಲು ಆರಂಭ ಮಾಡಿದೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಚುನಾವಣೆಗೆ ದುಡ್ಡು ಮಾಡಿಕೊಳ್ಳುವ ಉದ್ದೇಶದಿಂದ ಯಾವೆಲ್ಲ ಶಾಸಕರಿಗೆ ಮಂತ್ರಿ ಆಗದೆ ಇರುವುದರಿಂದ ಅಸಮಧಾನ ಇದೆಯೋ ಅವರಿಗೆ ದುಡ್ಡು ಮಾಡಿಕೊಡಲು ಹೊರಟಿದೆ’ ಎಂದು ಆಪಾದಿಸಿದರು.
‘ಇದಕ್ಕಾಗಿ ತರಾತುರಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ, ವಿಶ್ವೇರಯ್ಯ ನೀರಾವರಿ ನಿಗಮದಲ್ಲಿ, ಕರ್ನಾಟಕ ನೀರಾವರಿ ನಿಗಮಗಳ ಸಭೆ ಕರೆದು ಯೋಜನೆಗಳಿಗೆ ಅನುಮೋದನೆ ಪಡೆಯುತ್ತಿದ್ದಾರೆ, ಇದರಲ್ಲಿ ಪಾರದರ್ಶಕತೆ ಇಲ್ಲ. ಟೆಂಡರ್ ಹಣವನ್ನು ಕೂಡ ಎರಡು, ಮೂರು ಪಟ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ ಜನಜನಿತವಾಗಿರುವ 40% ಕಮಿಷನ್ ನ ಮುಂದುವರೆದ ಭಾಗವಿದು. ಟೆಂಡರ್ ಮೊತ್ತವನ್ನು ಹೆಚ್ಚು ಮಾಡಿ,ಯಾರು ಹೆಚ್ಚು ಕಮಿಷನ್ ನೀಡುತ್ತಾರೆ ಅವರಿಗೆ ಕಾಮಗಾರಿ ಕೊಡುತ್ತಿದ್ದಾರೆ, ತಮಗೆ ಬೇಕಾದ ಗುತ್ತಿಗೆದಾರರನ್ನು ಹುಡುಕಿ ಕೆಲಸ ನೀಡುತ್ತಿದ್ದಾರೆ. ಹೀಗೆ ಮಾಡಿ ಕಮಿಷನ್ ವಸೂಲಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ವಿವರಿಸಿದರು.
‘ಲೋಕೋಪಯೋಗಿ, ನೀರಾವರಿ, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸುಮಾರು 20,000 ಕೋಟಿ ರೂ. ಬಾಕಿ ಬಿಲ್ ಇದೆ. 10% ಕಮಿಷನ್ ಕೊಟ್ಟವರಿಗೆ ಕೆಲಸ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದೆ, ಇದು ಮುಖ್ಯಮಂತ್ರಿ ಕಚೇರಿಯಿಂದಲೇ ಆರಂಭವಾಗಿದೆ. ಈ ಬಗ್ಗೆ ದಾಖಲೆಗಳಿದ್ದು ಇದನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ’ ಎಂದು ಹೇಳಿದರು
‘ಸರ್ಕಾರಕ್ಕೆ, ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದೆ ಕಾನೂನುಬಾಹಿರವಾಗಿ ಈ ರೀತಿ ಮಾಡಿದರೆ ನೀವು ಸಿಕ್ಕಿಹಾಕಿಕೊಳ್ಳುತ್ತೀರ. ಈ ವಿಚಾರಕ್ಕೆ ತಾತ್ವಿಕ ಅಂತ್ಯ ಕಾಣಿಸುವವರೆಗೆ ನಾವು ಬಿಡುವುದಿಲ್ಲ. ನ್ಯಾಯಾಲಯದಲ್ಲಿ ಇವರ ವಿರುದ್ಧ ನಾವು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ’ ಎಂದರು.