ಬೆಂಗಳೂರು,ಜ.25-
ಕೇಂದ್ರ ಲೆಕ್ಕಪರಿಶೋಧಕರ ವರದಿ ಇಟ್ಟುಕೊಂಡು ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಬಿಜೆಪಿ ನಾಯಕರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ತಮ್ಮ ವಿರುದ್ಧ ಆರೋಪ ಮಾಡಿರುವವರು ಮೂರ್ಖರು. ಅವರಿಗೆ CAG ವರದಿ ಸರಿಯಾಗಿ ಅರ್ಥವಾಗಿಲ್ಲ ಎಂದು ಕಿಡಿಕಾರಿದರು.
‘ಬಿಜೆಪಿ ಕಚೇರಿಯಲ್ಲಿ ಸಚಿವರಾದ ಡಾ.ಸುಧಾಕರ್ ಮತ್ತು ಅಶ್ವಥ್ ನಾರಾಯಣ್ ಸುದ್ದಿಗೋಷ್ಠಿ ಮಾಡಿ ಬರೀ ಸುಳ್ಳುಗಳನ್ನ ಹೇಳಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 35 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಚಿವರ ಮೂಲಕ ಸುಳ್ಳು ಹೇಳಿಸಿದ್ದಾರೆ. ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ’ ಎಂದು ವ್ಯಂಗ್ಯವಾಡಿದರು.
‘ಸುಧಾಕರ್ MBBS ಡಾಕ್ಟರ್ ಎಂದುಕೊಂಡಿದ್ದೇನೆ. CAG ರಿಪೋರ್ಟ್ ಅರ್ಥ ಮಾಡಿಕೊಂಡಿಲ್ಲ ಅನ್ಸುತ್ತೆ. ಅದೇ ರೀತಿ ರೀ ಕನ್ಸಿಲೇಶನ್ ರಿಪೋರ್ಟ್ ಅನ್ನು ಅರ್ಥ ಮಾಡಿಕೊಂಡಿಲ್ಲ. ಅನುದಾನ, ಖರ್ಚು ತಾಳೆ ಆಗ್ತಿದ್ಯಾ, ಇಲ್ವಾ ಅಂತಾ ನೋಡೋದು ಸಾಮಾನ್ಯ. ಎಲ್ಲಾ ಕಾಲದಲ್ಲೂ ಕೆಲವು ಪರ್ಸೆಂಟೇಜ್ ತಾಳೆ ಆಗುವುದಿಲ್ಲ.ನಾನೂ ವರದಿ ತರಿಸಿಕೊಂಡು ನೋಡಿದ್ದೇನೆ. ನಮ್ಮ ಅವಧಿಯ ಬಜೆಟ್ ನಲ್ಲಿ ಶೇ.19ರಷ್ಟು ರೀಕನ್ಸಿಡರೇಶನ್ ಆಗಿಲ್ಲ ಎಂದು ಆಡಿಟ್ ವರದಿ ಹೇಳಿದೆ. ಅದಕ್ಕೂ ಮೊದಲು 2008-09 ರಲ್ಲಿ ಶೇ.49.87 ತಾಳೆ ಆಗಿಲ್ಲ ಅಂತಾ CAG ರಿಪೋರ್ಟ್ ಹೇಳಿತ್ತು. 2015-16 ರಲ್ಲಿ ಶೇ.16 ರೀ ಕನ್ಸಿಲೇಶನ್ ಕಡಿಮೆ ಆಗಿದೆ. ಆ ಮೂರ್ಖರಿಗೆ ಇದು ಅರ್ಥ ಆಗುತ್ತಾ?’ ಎಂದು ವಾಗ್ದಾಳಿ ನಡೆಸಿದರು.
‘ಹಣಕಾಸಿನ ವ್ಯವಸ್ಥೆಯಲ್ಲಿ ಶಿಸ್ತು ತಂದಿದ್ದೇ ನಮ್ಮ ಸರ್ಕಾರ. BJP ಆಡಳಿತದಲ್ಲಿ ಅಶಿಸ್ತು ಇತ್ತು. CAG ವರದಿಯನ್ನು ಸುಧಾಕರ್ ಓದಿದ್ದಾನೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ಲಂಚ ಹೊಡೆಯುವವರಿಗೆ ಓದಲು ಟೈಮ್ ಎಲ್ಲಿರುತ್ತದೆ. ಭ್ರಷ್ಟಾಚಾರಕ್ಕೂ, ಆರ್ಥಿಕ ಅಶಿಸ್ತಿಗೂ ವ್ಯತ್ಯಾಸವಿದೆ’ ಎಂದು ಗುಡುಗಿದರು.
‘ಅಲಿಬಾಬ 40 ಮಂದಿ ಕಳ್ಳರಲ್ಲಿ ಸುಧಾಕರ್ ಒಬ್ಬ ಸದಸ್ಯ. ಇವರೆಲ್ಲಾ ಏನೇನ್ ಮಾಡಿದ್ದಾರೆ ಎಂದು ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದ ಹೆಚ್.ಕೆ.ಪಾಟೀಲ್ ವರದಿ ಕೊಟ್ಟಿದ್ದಾರೆ. ಕೊರೋನಾ ಕಾಲದಲ್ಲಿ ಸುಧಾಕರ್ ಸುಮಾರು ಮೂರು ಸಾವಿರ ಕೋಟಿ ಲಂಚ ಪಡೆದಿದ್ದಾನೆ ಎಂಬ ವರದಿ ಇದೆ. ವಿಧಾನಸಭಾಧ್ಯಕ್ಷರು ಆ ವರದಿಯನ್ನು ವಿಧಾನಮಂಡಲದಲ್ಲಿ ಮಂಡನೆ ಮಾಡಿಲ್ಲ’ ಎಂದು ಆರೋಪಿಸಿದರು.
‘ಕೊರೊನಾ ಕಾಲದ ಭ್ರಷ್ಟಚಾರವನ್ನು ವಿಶೇಷ ಆಡಿಟ್ ಮಾಡೋಕೆ ಸರ್ಕಾರ ಒಪ್ಪಲಿಲ್ಲ. ತಪ್ಪು ಮಾಡಿಲ್ಲ ಎಂದರೆ ವಿಶೇಷ ಆಡಿಟ್‍ಗೆ ಒಪ್ಪಬಹುದಿತ್ತಲ್ಲ. ಬಿಜೆಪಿ ಸುಳ್ಳಿನ ಕಾರ್ಖಾನೆ. ರವಿಕುಮಾರ್ ಅವರನ್ನು ಸುಳ್ಳು ಹೇಳಲಿಕ್ಕಾಗಿಯೇ ಇಟ್ಟುಕೊಂಡಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಾವೇದ್ ಅಖ್ತರ್ ಸ್ಪಷ್ಟ ಉತ್ತರ ಬರೆದಿದ್ದಾರೆ’ ಎಂದರು.