ಬೆಂಗಳೂರು,ಫೆ.11-
ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ Congress ಮತದಾರರಿಗೆ ಘೋಷಿಸಿರುವ ಭರ್ಜರಿ ಕೊಡುಗೆಗಳ ಗ್ಯಾರಂಟಿ ಕಾರ್ಡ್ (Congress guarantee card) ಅನ್ನು ರಾಜ್ಯದ ಪ್ರತಿಯೊಬ್ಬ ಮತದಾರರ ಮನೆಗೆ ತಲುಪಿಸಲು ಮುಂದಾಗಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾಂಗ್ರೆಸ್ ಅಧ್ಯಕ್ಷ DK Shivakumar, ‘ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಎರಡು ಐತಿಹಾಸಿಕ ಗ್ಯಾರಂಟಿ ಯೋಜನೆ ಗಳನ್ನು ಘೋಷಿಸಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2000 ರೂಪಾಯಿ ತೀರ್ಮಾನಿಸಿದೆ’ ಎಂದು ಹೇಳಿದರು.
‘ಈ ಯೋಜನೆಗಳ ಮೂಲಕ ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ರೂಪಾಯಿಯನ್ನು ಪ್ರತಿ ಕುಟುಂಬಕ್ಕೆ ನೀಡಲಾಗುವುದು. ಈ ಕುರಿತು ನಾನು ಹಾಗೂ ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ಅನ್ನು ಪಕ್ಷದ ಕಾರ್ಯಕರ್ತರು ಪಡೆದುಕೊಂಡು ಪ್ರತಿ ಬೂತ್ ನ ಮನೆ ಮನೆಗೂ ನೀಡಬೇಕು ಎಂದು ಸೂಚಿಸಲಾಗಿದೆ’ ಎಂದು ಹೇಳಿದರು.
‘ಈ ಗ್ಯಾರಂಟಿ ಕಾರ್ಡ್ ಅನ್ನು ಜನರಿಗೆ ನೀಡಿ ನಮ್ಮ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಯಾರಿಗೆಲ್ಲ ಈ ಯೋಜನೆ ಬಗ್ಗೆ ಆಸಕ್ತಿ ಇದೆ ಎಂದು ಅವರ ವಿವರ ಪಡೆಯಬೇಕು. ಈ ಸಮಯದಲ್ಲಿ ಮನೆ ಮನೆಗೆ ಹೋಗಿ ಕಾರ್ಡ್ ನೀಡುವ ನೋಂದಣಿದಾರರ ಹೆಸರು, ದೂರವಾಣಿ ಸಂಖ್ಯೆ ಪಡೆಯಬೇಕು. ಯಾರು ಹೆಚ್ಚು ಮನೆಗಳಿಗೆ ಈ ಕಾರ್ಡ್ ವಿತರಣೆ ಮಾಡುತ್ತಾರೋ ಅವರಿಗೆ ಆಯಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಹುಮಾನ ನೀಡಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.
‘ಕಾರ್ಯಕರ್ತರು ಈ ಅವಕಾಶವನ್ನು ಬಳಸಿಕೊಂಡು ಕಾಂಗ್ರೆಸ್ ಕೊಡುಗೆಯನ್ನು ಜನರಿಗೆ ತಲುಪಿಸಬೇಕು. ಒಟ್ಟು 1 ಕೋಟಿ ಕಾರ್ಡ್ ಗಳನ್ನು ಮನೆಗೆ ಕಳುಹಿಸಿಕೊಡಬೇಕು ಎಂದು ನಾನು ಎಲ್ಲಾ ಕಾರ್ಯಕರ್ತರು ಹಾಗೂ ನಾಯಕರಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ’ ಎಂದರು.

