ಬೆಂಗಳೂರು,ಏ.9: ಲೋಕಸಭೆ ಚುನಾವಣೆಯ ಕಾವು ತೀವ್ರಗೊಂಡಿರುವ ಬೆನ್ನಲ್ಲೇ ರಾಜಧಾನಿ ಬೆಂಗಳೂರುನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿನ ವೈಯಾಲಿಕಾವಲ್ ಆಟದ ಮೈದಾನದಲ್ಲಿ ಆರ್ ಎಸ್ ಎಸ್ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕ್ರಿಯಾ ಸಿದ್ಧಿ ಸತ್ವೇ ಭವತಿ ಮಹಾತಂ ನೋಪಕರಣೆ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಪ್ರದೇಶದ ಸುತ್ತಮುತ್ತಲಿನ ಸಂಘ ಪರಿವಾರದ ಕಾರ್ಯಕರ್ತರು ಗಣವೇಶಧಾರಿಗಳಾಗಿ ಮೆರವಣಿಗೆಯಲ್ಲಿ ಸಾಗಿ ಬಂದು ಆಟದ ಮೈದಾನದಲ್ಲಿ ಸಮಾವೇಶಗೊಳ್ಳುವಂತೆ ರೂಟ್ ಮ್ಯಾಪ್ ಸಿದ್ಧಪಡಿಸಲಾಗಿತ್ತು ಆದರಂತೆ ಕೆಲವು ಕಡೆಯಿಂದ ಆರ್ ಎಸ್ ಎಸ್ ಕಾರ್ಯಕರ್ತರು ಮೆರವಣಿಗೆ ತೆರಳುವ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ತಕರಾರು ತೆಗೆದಿದ್ದಾರೆ.
ಆಟದ ಮೈದಾನದಲ್ಲಿ ಪಕ್ಷದ ವತಿಯಿಂದ ಕಾರ್ಯಕ್ರಮ ಆಯೋಜಿಸಲು ನಾವು ಅನುಮತಿ ಕೇಳಿದರು ಚುನಾವಣಾ ಆಯೋಗ ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ನಿರಾಕರಿಸಿದೆ. ಆದರೆ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಅನುಮತಿ ಹೇಗೆ ನೀಡಲಾಯಿತು ಎಂದು ಪ್ರಶ್ನಿಸಿದ್ದಾರೆ.
ಸ್ಥಳಕ್ಕೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಸೇರಿದಂತೆ ಅನೇಕ ಮುಖಂಡರು ಆಗಮಿಸಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ದೌಡಾಯಿಸಿದ ಪೊಲೀಸರು ಕಾರ್ಯಕ್ರಮ ನಡೆಸಿದಂತೆ ಸಂಘಟಕರಿಗೆ ಸೂಚಿಸಿದ್ದಾರೆ. ಆದರೆ ತಾವು ಯುಗಾದಿ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಇದು ರಾಜಕೀಯ ಪ್ರೇರಿತ ಕಾರ್ಯಕ್ರಮವಲ್ಲ ವರ್ಷದ ಮೊದಲ ಹಬ್ಬವನ್ನು ಸ್ವಾಗತಿಸುವ ಸಂಪ್ರದಾಯವಾಗಿದೆ ಇದಕ್ಕೆ ತಕರಾರು ತೆಗೆಯುವುದು ಸರಿಯಲ್ಲ ಎಂದು ವಾದಿಸಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಆಟದ ಮೈದಾನದಲ್ಲಿ ರಾಜಕೀಯ ಸಭೆ ನಡೆಸಬಾರದು ಎಂದು ನೀತಿ ಸಂಹಿತೆ ಹೇಳಿದೆ ಸ್ಥಳೀಯವಾಗಿ ಬಿಜೆಪಿ ಶಾಸಕರು ಪ್ರಬಲರಾಗಿದ್ದಾರೆ ಎಂದು ಅವರ ಒತ್ತಡಕ್ಕೆ ಮಣಿದು ಪೊಲೀಸರು ಆಟದ ಮೈದಾನವನ್ನು ಕಾರ್ಯಕ್ರಮಕ್ಕೆ ಕೊಟ್ಟಿದ್ದಾರೆ ಇದು ಸರಿಯಲ್ಲ ಆಟದ ಮೈದಾನ ಮಕ್ಕಳ ಆಟಕ್ಕೆ ಮೀಸಲಾಗಿ ಉಳಿಯಬೇಕು ಹೀಗಾಗಿ ಇಲ್ಲಿ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ ಎಂದು ಧರಣಿಗೆ ಮುಂದಾಗಿದ್ದಾರೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರು ಮತ್ತು ಸಂಘ ಪರಿವಾರ ಕಾರ್ಯಕರ್ತರ ಮನವೊಲಿಸಿದರು.
ಪೊಲೀಸರ ಮನವಿಗೆ ಸ್ಪಂದಿಸಿದ ಸಂಘ ಪರಿವಾರ ನಾಯಕರು ಚುನಾವಣೆ ಸಮಯದಲ್ಲಿ ಅನಗತ್ಯ ವಿವಾದಕ್ಕೆ ಅವಕಾಶ ನೀಡಬಾರದು ಎಂದು ಹೇಳಿ ಕಾರ್ಯಕ್ರಮ ನಡೆಯುವ ಸ್ಥಳದಿಂದ ನಿರ್ಗಮಿಸಿದರು.