ಬೆಂಗಳೂರು,ಆ.6- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬಂದ ನಂತರ ಕಾರ್ಯಕರ್ತರನ್ನು ಕೇಳುವವರಿಲ್ಲ. ಕೆಲ ಸಚಿವರು ಹಿರಿಯ ಶಾಸಕರನ್ನು ಗೌರವಿಸುತ್ತಿಲ್ಲ, ವರ್ಗಾವಣೆ, ಅನುದಾನ ಬಿಡುಗಡೆ ಸರಿದಂತೆ ಇತರ ವಿಷಯಗಳಲ್ಲಿ ಶಾಸಕರ ಮಾತುಗಳಿಗೆ ಬೆಲೆ ನೀಡದೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಅಸಮಾಧಾನಗಳು ವ್ಯಾಪಕವಾಗಿವೆ.
ಕಾರ್ಯಕರ್ತರನ್ನು ಪಕ್ಷದ ಕಚೇರಿ ಮತ್ತು ಬಿಜೆಪಿ ವಿರುದ್ಧದ ಹೋರಾಟಕ್ಕೆ ಸೀಮಿತಗೊಳಿಸಲಾಗಿದೆ. ಕೆಲವು ಮಂತ್ರಿಗಳಂತೂ ಕಾರ್ಯಕರ್ತರತ್ತ ತಿರುಗಿಯೂ ನೋಡುವುದಿಲ್ಲ. ಶಾಸಕರಿಗೆ ಮನ್ನಣೆ ನೀಡದವರು ಕಾರ್ಯಕರ್ತರನ್ನು ಹೇಗೆ ಪರಿಗಣಿಸುತ್ತಾರೆ ಎಂದು ಕಾರ್ಯಕರ್ತರ ಬಹು ದೊಡ್ಡ ವರ್ಗ ಅಸಮಧಾನ ವ್ಯಕ್ತಪಡಿಸಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಕೆಲವು ಶಾಸಕರು, ಹಿರಿಯ ಕಾರ್ಯಕರ್ತರು ತಮ್ಮ ಅಸಮಧಾನ ತೋಡಿಕೊಂಡಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನ ಕಳೆಯುವ ಮೊದಲೆ ಇಂತಹ ಆರೋಪ ಕೇಳಿ ಬಂದಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದು,ತಕ್ಷಣವೇ ಈ ಅಸಮಧಾನಕ್ಕೆ ಮದ್ದು ನೀಡುವಂತೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ,ಶಾಸಕರ ಅಸಮಾಧಾನಗಳನ್ನು ತಣಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆಯಿಂದ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಭೆ ನಡೆಸಲು ಮುಂದಾಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾವಾರು ಸಭೆಗಳು ಹಂತ ಹಂತವಾಗಿ ನಡೆಯಲಿವೆ.ಈ ಸಭೆಯಲ್ಲಿ ಶಾಸಕರ ಅಹವಾಲಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಜೊತೆಗೆ ಕಾರ್ಯಕರ್ತರ ಅಹವಾಲು ಆಲಿಸಲು ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.
ನಾಳೆ ಮೊದಲ ಹಂತದಲ್ಲಿ ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳ ಉಸ್ತುವಾರಿ ಸಚಿವರು, ಸಚಿವರು ಹಾಗೂ ಶಾಸಕರೊಂದಿಗೆ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಹಾಗೂ ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ಸಭೆಗಳು ನಡೆಯಲಿವೆ.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾಳೆಯಿಂದ ಮುಖ್ಯಮಂತ್ರಿ ನೇತೃತ್ವದಲ್ಲಿ ಜಿಲ್ಲಾ ಸಚಿವರ, ಶಾಸಕರ ಸಭೆ ನಡೆಯಲಿದೆ. ಜೊತೆಗೆ ಸಮಾಜಗಳ ಮುಖಂಡರ ಜೊತೆಯೂ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಸಚಿವರು ಹಾಗೂ ವಿವಿಧ ಇಲಾಖೆಗಳ ಸಚಿವರ ಬಗ್ಗೆ ಶಾಸಕರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಬಳಿ ತಮ್ಮ ಅಭಿಪ್ರಾಯ ತಿಳಿಸಲು ಮುಕ್ತ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.