ಬೆಂಗಳೂರು,ಆ.17- ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳಿಗ್ಗೆ
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಧಾರವಾಡ ಹಾಗೂ ಬೀದರ್ ಸೇರಿ ರಾಜ್ಯದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿ ಕೋಟ್ಯಾಂತರ ಮೌಲ್ಯದ ಅಕ್ರಮ ಆಸ್ತಿ ಪಾಸ್ತಿ ಪತ್ತೆಹಚ್ಚಿದ್ದಾರೆ.
ದೇವನಹಳ್ಳಿಯ ಗ್ರೇಡ್- 2 ತಹಶೀಲ್ದಾರ್ ಶಿವರಾಜ್, ಚಿಕ್ಕಜಾಲ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಪತಿ ಸೇರಿದಂತೆ ನಾಲ್ವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.
ತುಮಕೂರು ಜನಸ್ಪಂದನ ಕಚೇರಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೂವನಹಳ್ಳಿ ನಾಗರಾಜ್, ಲಂಚ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಬಂಧಿತರಾಗಿದ್ದ ಬಿಬಿಎಂಪಿ ಕಂದಾಯ ನಿರೀಕ್ಷಕ ನಟರಾಜ್ ದಾಳಿಗೊಳಗಾದವರಲ್ಲಿ ಸೇರಿದ್ದಾರೆ.
ಭೂವನಹಳ್ಳಿ ನಾಗರಾಜ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ ನಿವೃತ್ತರಾಗಿ ಬಳಿಕ ಜನಸ್ಪಂದನ ಕಚೇರಿಯ ಸಿಇಒ ಹುದ್ದೆಗೆ ನೇಮಕಗೊಂಡಿದ್ದರು.
ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಈ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇವರಿಗೆ ಸಂಬಂಧಿಸಿದಂತೆ 23 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.
ತುಮಕೂರಿನಲ್ಲಿ ದಾಳಿ:
ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ನಾಗರಾಜು ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ನಗರದ ದೇವನೂರು ಚರ್ಚ್ ಬಳಿ ಇರುವ ನಾಗರಾಜು ಮನೆ ಮತ್ತು ನಗರದ ಬೆಳಗುಂಬ ರಸ್ತೆಯಲ್ಲಿರುವ ಟೂಡಾ (ತುಮಕೂರು ನಗರಾಭಿವೃದ್ದಿ ಪ್ರಾಧಿಕಾರ) ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ದಾಳಿ:
ಚಿಕ್ಕಜಾಲ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಿಪತಿ ಅವರಿಗೆ ಸೇರಿದ ತಾಲ್ಲೂಕಿನ ಕೋಡೂರು ಗ್ರಾಮದ ತೋಟದ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.
ಕೋಡೂರಿನಲ್ಲಿ ಮೂರು ಎಕರೆ ಜಮೀನು ಹಾಗೂ ತೋಟದ ಮನೆ ಇದೆ. ಬೆಳಿಗ್ಗೆಯೇ ತೋಟದ ಮನೆಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.
ಕೊಡಗಿನಲ್ಲಿ ಶೋಧ:
ಕೊಡಗು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಹಾಗೂ ಹಾರಂಗಿ ಜಲಾಶಯದ ಅಧೀಕ್ಷಕ ಎಂಜಿನಿಯರ್ ರಘುಪತಿ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ನಂಜುಂಡೇಗೌಡ ಅವರ ಇಲ್ಲಿನ ನಿವಾಸ ಹಾಗೂ ಕಚೇರಿ, ಮೈಸೂರಿನ ಇವರ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಹಾರಂಗಿ ಜಲಾಶಯದ ಅಧೀಕ್ಷಕ ಎಂಜಿನಿಯರ್ ರಘುಪತಿ ಅವರ ಮೈಸೂರಿನ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಧಾರವಾಡದಲ್ಲಿ ದಾಳಿ:
ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ ಸಂತೋಷ್ ಆನಿ ಶೆಟ್ಟರ ಅವರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಧಾರವಾಡದ ಮಿಚಿಗನ್ ಬಡಾವಣೆಯ ಮನೆ ಮೇಲೆ ದಾಳಿ ನಡೆದಿದೆ.
ಬೆಂಗಳೂರಿನ ಬಿಬಿಎಂಪಿ ಮಹದೇವಪುರ ವಲಯದ ಕಂದಾಯ ನಿರೀಕ್ಷಕ ನಟರಾಜ್ ಅವರಿಗೆ ಸೇರಿರುವ ಕನಕಪುರ ತಾಲ್ಲೂಕಿನ ಶಿವನಹಳ್ಳಿಯಲ್ಲಿಯಲ್ಲಿರುವ ತೋಟದ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
7.5 ಎಕರೆ ತೆಂಗಿನತೋಟ:
ಶಿವನಹಳ್ಳಿಯವರಾದ ನಟರಾಜ್ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಕೇಳಿ ಬಂದಿತ್ತು. ಹಾಗಾಗಿ, ನಟರಾಜ್ ಅವರ ಸ್ವಂತ ಊರಿನಲ್ಲಿ ಕಟ್ಟಿರುವ ಭವ್ಯ ಬಂಗಲೆಗೆ ದಾಳಿ ನಡೆಸಿ ಹಾಗೂ ಸಮೀಪದಲ್ಲಿರುವ 7.5 ಎಕರೆ ತೆಂಗಿನತೋಟ, ಅಡಿಕೆ ತೋಟದ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದರು
ಕಳೆದ ಆ. 4 ರಂದು ಪಾರ್ಟ್ ವೊಂದರ 79 ಫ್ಲ್ಯಾಟ್ ಗಳಿಗೆ ಖಾತೆ ಮಾಡಲು 5 ಲಕ್ಷ ಹಣ ಪಡೆಯುವಾಗ ನಟರಾಜ್ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು.
ಬೀದರ್ ನಲ್ಲಿ ಶೋಧ:
ಚಿಟಗುಪ್ಪ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ವಿಜಯಕುಮಾರ ಎಂಬುವರ ಎರಡು ಮನೆಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೀದರ್ ತಾಲ್ಲೂಕಿನ ಹೊಸಕನಹಳ್ಳಿ ಗ್ರಾಮ ಹಾಗೂ ಹುಮನಾಬಾದ್ ಪಟ್ಟಣದ ಟೀಚರ್ಸ್ ಕಾಲೊನಿಯಲ್ಲಿನ ಅವರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
15 ಲಕ್ಷ ನಗದು ಜಪ್ತಿ:
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಕೆ.ಮಹೇಶ್ ಹಾಗೂ ಪತ್ನಿ ಬಿಬಿಎಂಪಿ ಎಇ ಎಚ್. ಭಾರತಿ ಅವರ ಜಯನಗರದಲ್ಲಿನ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ₹15 ಲಕ್ಷ ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಕೊಪ್ಪಳದ ನಿರ್ಮಿತಿ ಕೇಂದ್ರದಲ್ಲಿ ಕಚೇರಿ ವ್ಯವಸ್ಥಾಪಕರಾಗಿರುವ ಮಂಜುನಾಥ ಬನ್ನಿಕೊಪ್ಪ ಕೆಲಸ ಮಾಡುವ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆಸಿದೆ.
ನಿರ್ಮಿತಿ ಕೇಂದ್ರದ ಬಡಾವಣೆಯಲ್ಲಿರುವ ಕಚೇರಿಯಲ್ಲಿ ರಾಯಚೂರಿನಿಂದ ಬಂದಿರುವ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಒಟ್ಟು ಐದು ತಂಡಗಳಲ್ಲಿ ದಾಳಿ ನಡೆಸಲಾಗಿದ್ದು, ಮಂಜುನಾಥ ಹೂಡಿಕೆ ಮಾಡಿರುವ ಕೊಪ್ಪಳ ತಾಲ್ಲೂಕಿನ ಹುಲಿಗಿಯ ಮಾರ್ಕ್ ಇನ್ ಲಾಡ್ಜ್ ನ ಮೇಲೂ ದಾಳಿ ನಡೆದಿದೆ.