ಬೆಂಗಳೂರು ,ಡಿ.26 -ಮಹಾಮಾರಿ ಕೊರೊನಾ ಆತಂಕವನ್ನು ಬದಿಗೊತ್ತಿ ನಗರದಲ್ಲಿ 31ರ ರಾತ್ರಿ ನಡೆಯಲಿರುವ ಹೊಸ ವರ್ಷಾಚರಣೆಯನ್ನು ಸಂಭ್ರಮ (New Year 2024) ಸಡಗರದಿಂದ ಆಚರಿಸಲು ಸಮರೋಪಾದಿಯ ಸಿದ್ಧತೆಗಳು ನಡೆಯುತ್ತಿದ್ದು, ಸಂಭ್ರಮದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.
ಹೊಸ ವರ್ಷಾಚರಣೆಯ ವೇಳೆ ಕೋವಿಡ್ ಮಾರ್ಗಸೂಚಿಯ ನಿಯಂತ್ರಣ ಇರಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ
ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧದ ಸೂಚನೆಗಳನ್ನು ನೀಡದೇ ಬಿಗಿ ಭದ್ರತೆ, ವಾಹನ ಸಂಚಾರ ಬದಲಾವಣೆಯ ವಿವರಗಳನ್ನು ನೀಡಿದರು.
ನಗರದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮ (New Year 2024) ಸಡಗರದಿಂದ ಆಚರಿಸಲು ಅನುವು ಮಾಡಿಕೊಡಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ,ಸಂಭ್ರಮದ ವೇಳೆ ಕಾನೂನು ಮೀರಿದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೊಸ ವರ್ಷಾಚರಣೆಗೆ ಸಂಬಂಧಿಸಿ ಎರಡು ಸುತ್ತಿನ ಸಭೆ ಮಾಡಿದ್ದೇವೆ. ಗೃಹಮಂತ್ರಿಯ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಯ ಜೊತೆಗೆ ಚರ್ಚೆ ನಡೆಸಿದ್ದೇವೆ. ಚರ್ಚೆಗಳ ಒಟ್ಟು ಹಿನ್ನೆಲೆಗಳನ್ನು ಇಟ್ಟುಕೊಂಡು ಭದ್ರತೆ, ಸುರಕ್ಷತೆಯ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಹೊಸ ವರ್ಷಾಚರಣೆಯ ಕೇಂದ್ರ ಬಿಂದುವಾಗಿರುವ ಎಂ.ಜಿ ರಸ್ತೆ ಬ್ರಿಗೇಡ್ ರಸ್ತೆ, ಇಂದಿರಾ ನಗರ, ಕೋರಮಂಗಲ ಸೇರಿದಂತೆ ಎಲ್ಲಾ ಕಡೆ ಸೂಕ್ತ ಬಂದೋಬಸ್ತ್ ನಿಯೋಜನೆ ಮಾಡಲಾಗುತ್ತದೆ ಎಂದರು.
ಹೆಚ್ಚುವರಿ ಪೊಲೀಸ್ ಆಯುಕ್ತರು, ಒಬ್ಬರು ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿ 15, ಎಸಿಪಿ 45, ಪೊಲೀಸ್ ಇನ್ಸ್ ಪೆಕ್ಟರ್ 160, ಪಿಎಸ್‌ಐ 600, ಎಎಸ್‌ಐ 600 ಸೇರಿ 5200 ಸಾವಿರ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗುತ್ತಿದ್ದು,ಪರಿಸ್ಥಿತಿಯ ಮೇಲೆ ಹದ್ದಿನ ಕಣ್ಣಿಡಲಾಗುವುದು ಎಂದು ಹೇಳಿದರು.
ವರ್ಷಾಚರಣೆಯಲ್ಲಿ ಭಾಗವಹಿಸುವ ಮಹಿಳೆಯರ ಸುರಕ್ಷತೆಯ ಹಿನ್ನೆಲೆಯಲ್ಲಿ ಪೊಲೀಸ್ ಕಿಯೋಸ್ಕ್ ಗಳನ್ನು ತೆರೆಯಲಾಗುತ್ತದೆ.ತುರ್ತು ಪರಿಸ್ಥಿತಿಯಲ್ಲಿ ಸೇವೆ ಬಳಸಬಹುದಾಗಿದೆ,ಕಳೆದ ಬಾರಿ ವಿಪರೀತ ಮದ್ಯಪಾನ ಮಾಡಿ ಅವಾಂತರ ಮಾಡಿದವರನ್ನು ಠಾಣೆಗೆ ಕರೆಸಿ ಎಚ್ಚರಿಕೆ ಕೊಡಲಾಗಿದೆ ಎಂದರು.
ಈ ಬಾರಿ ತಡರಾತ್ರಿ 1 ಗಂಟೆ ವರೆಗೆ ಅನುಮತಿ ನೀಡಲಾಗಿದೆ. ಈಗಾಗಲೆ ಕ್ಲಬ್, ಪಬ್ ಗಳ ಮಾಲೀಕರ ಜೊತೆ ಸಭೆ ನಡೆಸಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅಸ್ಪದ ನೀಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಏರ್ ಪೋರ್ಟ್ ರಸ್ತೆ ಪಡಿಸಿ ಫ್ಲೈ ಓವರ್ ಹೊರತುಪಡಿಸಿ ಉಳಿದೆಲ್ಲಾ ಫ್ಲೈ ಓವರ್ ರಸ್ತೆಯಲ್ಲಿ ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 6ರ ವರೆಗೂ ಬಂದ್ ಆಗಿರಲಿದೆ.
ಎಂಜಿ ರಸ್ತೆ ಸುತ್ತಮುತ್ತ ರಾತ್ರಿ 8 ಗಂಟೆಯಿಂದ ತಡರಾತ್ರಿ 1 ಗಂಟೆಯವರೆಗೆ ವಾಹನ ಸಂಚಾರ ನಿಷೇಧ ಮಾಡಲಾಗಿದ್ದು,ಭಾರಿ ವಾಹನಗಳ ಸಂಚಾರಕ್ಕೆ ರಾತ್ರಿ 11 ಗಂಟೆಯ ಬಳಿಕ ಅವಕಾಶ ಮಾಡಿಕೊಡಲಾಗುತ್ತದೆ.
ರಸ್ತೆಗಳಲ್ಲಿ ಅಪಾಯಕಾರಿ ವೀಲಿಂಗ್ ತಡೆಯುವುದು ಪಾನಮತ್ತರಾಗಿ ವಾಹನ ಚಲಾಯಿಸುವುದನ್ನು ತಡೆಯಲು 48 ಕಡೆಗಳಲ್ಲಿ ನಾಕಾಬಂದಿ ಮಾಡಿ ತಪಾಸಣೆಗಳನ್ನು ನಡೆಸಲಾಗುತ್ತದೆ ಎಂದು ವಿವರ ನೀಡಿದರು.
ALSO READ | Latest Kannada News | News In Kannada
ಹೊಸ ವರ್ಷ ಸ್ವಾಗತಕ್ಕೆ ತಯಾರಿ ಹೇಗಿದೆ ಗೊತ್ತಾ | New Year Celebrations