ಬೆಂಗಳೂರು, ಸೆ. 10-
ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ
ಕ್ರಿಷ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮುಂಬೈನಲ್ಲಿ ಸಿಕ್ಕಿಬಿದ್ದಿದ್ದಾನೆ.
ಖಚಿತ ಮಾಹಿತಿಯನ್ನು ಆಧರಿಸಿ ಮುಂಬೈಯಲ್ಲಿ ಕಾರ್ಯಾಚರಣೆ ಕೈಗೊಂಡ ಕರ್ನಾಟಕ ಸಿಐಡಿ ಘಟಕದ ಸೈಬರ್ ಕ್ರೈಂ ಪೊಲೀಸರು ಪ್ರಮುಖ ಆರೋಪಿ ಶುಭಾಂಗ್ ಜೈನ್(26)ನನ್ನು ಬಂಧಿಸಿದ್ದಾರೆ.
ಬಂಧಿತನಿಂದ 2 ಮೊಬೈಲ್‌ಗಳು ಹಾಗೂ 2 ಲ್ಯಾಪ್ ಟಾಪ್‌ಗಳನ್ನು ಜಪ್ತಿ ಮಾಡಿ ವಂಚನೆಯ ಹಣವನ್ನು ಅಮಾನತ್ತು ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ.
ಸೈಫರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿಯು ಕಂಪನಿಯ ವ್ಯವಹಾರಕ್ಕೆ ಉಪಯೋಗಿಸುತ್ತಿದ್ದ ಕ್ರಿಷ್ಟೋ ಪಾಸ್‌ವರ್ಡ್ ಬದಲಾಯಿಸಿಕೊಂಡು ಕಂಪನಿಯ ಆಕೌಂಟ್‌ನಲ್ಲಿದ್ದ ಕ್ರಿಸ್ಟೋಕರೆನ್ಸಿಯನ್ನು ರೂಪಾಯಿಗೆ ಪರಿವರ್ತಿಸಿಕೊಂಡು ತನ್ನ ಹಾಗೂ ಇತರೇ ಸ್ನೇಹಿತರ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿಕೊಂಡು ಪರಾರಿಯಾಗಿದ್ದ.
ಇದರಿಂದ ಕೋಟಿಗಟ್ಟಲೆ ನಷ್ಟ ಅನುಭವಿಸಿದ ಸಂಸ್ಥೆ ಕಳೆದ 2022 ನೇ ಏಪ್ರಿಲ್ ನಲ್ಲಿ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.ಈ ಬಗ್ಗೆ ಹೆಚ್ಚಿನ ತನಿಖೆಯ ಸಲುವಾಗಿ ಪ್ರಕರಣವು ಸಿಐಡಿ ಘಟಕದ ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾವಣೆಯಾಗಿತ್ತು.
ಆರೋಪಿಯು ದೂರುದಾರ ಕಂಪನಿಗೆ ಸಂಬಂಧಿಸಿದ ಕ್ರಿಷ್ಟೋ ವಾಲೆಟ್‌ನಿಂದ ಕಂಪನಿಯ ಗಮನಕ್ಕೆ ಬಾರದೇ ತನ್ನ, ತನ್ನ ಕುಟುಂಬ ಸದಸ್ಯರ ಹಾಗೂ ತನ್ನ ಸ್ನೇಹಿತರ ಕ್ರಿಷ್ಟೋ ವಾಲೆಟ್ ಗಳಿಗೆ ಕ್ರಿಪ್ಟೋ ಕರೆನ್ಸಿಯನ್ನು ವರ್ಗಾವಣೆ ಮಾಡಿಕೊಂಡು ನಂತರ ತನ್ನ ಸ್ನೇಹಿತರ ಹಾಗೂ ಇತರೇ ವ್ಯಕ್ತಿಗಳ ಬ್ಯಾಂಕ್ ಗಳಿಗೆ ವರ್ಗಾವಣೆ ಮಾಡುತ್ತಿದ್ದ.
ಆನಂತರ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳ ಮೂಲಕ ಅದನ್ನು ನಗದಾಗಿ ಪರಿವರ್ತಿಸಿಕೊಂಡು ವಂಚನೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಸೈಬರ್ ಕ್ರೈಮ್ ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.