ಬೆಂಗಳೂರು – ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಿದೆ. ಇದು ಎಲ್ಲಾ ಕಾಲಕ್ಕೂ ಎಲ್ಲರಿಗೂ ಸಲ್ಲುವ ನಾಣ್ನುಡಿ.ಇಂತಹ ಗಾದೆ ಮಾತಿಗೆ ಅನ್ವರ್ಥ ಬಿಜೆಪಿ ನಾಯಕ ಸಿಟಿ ರವಿ ಎನ್ನಬಹುದು.
ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ದತ್ತಪೀಠ ಚಳುವಳಿಯಲ್ಲಿ ಗುರುತಿಸಿಕೊಳ್ಳುವ ಮೂಲಕ ಕಾಫಿ ನಾಡು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಶಾಸಕನಾಗುವ ಮೂಲಕ ಚಿಕ್ಕವಯಸ್ಸಿನಲ್ಲೇ ವಿಧಾನಸಭೆ ಪ್ರವೇಶಿಸಿದ ನಾಯಕ ಹೆಗ್ಗಳಿಕೆ ಗಳಿಸಿದ ಸಿ.ಟಿ.ರವಿ ನೋಡುಗರು ನಿಬ್ಬೆರಗಾಗುವ ರೀತಿಯಲ್ಲಿ ಬೆಳೆದರು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ಸಿಟಿ ರವಿ ತಮ್ಮ ಸಂಘಟನಾ ಚಾತುರ್ಯ ಮತ್ತು ಮಾತಿನ ಮೂಲಕ ವರಿಷ್ಠರ ಗಮನ ಸೆಳೆದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸುವಷ್ಟರ ಮಟ್ಟಿಗೆ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದರು.
ಶಾಸಕರಾಗಿ, ಮಂತ್ರಿಯಾಗಿ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ಇವರು ಈಗ ಯಾರೂ ಪರಿಗಣನೆಗೆ ತೆಗೆದುಕೊಳ್ಳಲಾರದ ನಾಯಕ ಎಂಬಂತಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಇವರ ಯತ್ನ ಸಫಲವಾಗಲಿಲ್ಲ ಎನ್ನಲಾಗಿದೆ. ಇದಕ್ಕೂ ಮುನ್ನ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಅವರು ಬೆಂಗಳೂರಿಗೆ ಬಂದಾಗ ಬಿಜೆಪಿಯ ಎಲ್ಲಾ ನಾಯಕರಂತೆ ಇವರೂ ಕೂಡ ಅವರ ಭೇಟಿಗೆ ಹೋದರೂ,ಗಡ್ಕರಿ ಇವರತ್ತ ತಿರುಗಿಯೂ ನೋಡಲಿಲ್ಲ ಎನ್ನಲಾಗಿದೆ.
ಪಕ್ಷದ ಪ್ರಮುಖ ಸಭೆಗಳು ಸೇರಿದಂತೆ ಎಲ್ಲಿಯೂ ರವಿ ಅಷ್ಟಾಗಿ ಕಾಣಿಸುತ್ತಿಲ್ಲ.ಕಂಡರೂ ಯಾರೂ ಅವರನ್ನು ಪರಿಗಣಿಸುತ್ತಿಲ್ಲ ಎನ್ನಲಾಗುತ್ತಿದೆ.
ಕಳೆದ ಒಂದು ವರ್ಷದ ಹಿಂದೆ ಇದೇ ಸಿ.ಟಿ. ರವಿ ರಾಜ್ಯ ಬಿಜೆಪಿಯ ಮಟ್ಟಿಗೆ ಹೈಕಮಾಂಡ್ ಎಂದೇ ಪರಿಗಣಿಸಲ್ಪಟ್ಟಿದ್ದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು ನೆರೆಯ ಗೋವಾ ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳ ಉಸ್ತುವಾರಿಯಾಗಿ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದರು.
ಮಾಜಿ ಮಂತ್ರಿ ಆಗಿಯೂ ರಾಜ್ಯ ರಾಜಕಾರಣದಲ್ಲಿ ಗುರುತಿಸಲ್ಪಟ್ಟ ಸಿಟಿ ರವಿ ಬದಲಾದ ಕಾಲಮಾನಕ್ಕೆ ಅನುಗುಣವಾಗಿ ತಮ್ಮ ಮಾತಿನ ಶೈಲಿಯನ್ನು ಬದಲಾಯಿಸಿಕೊಳ್ಳದೆ,ಅಧಿಕಾರದ ಅಮಲಿನಲ್ಲಿ ತೇಲಿದ್ದು, ಬೆಂಕಿ ಯುಗುಳುವ ಮಾತುಗಳನ್ನು ಆಡಿದರೆ ಜನ ಗಮನಿಸುತ್ತಾರೆ ಎಂದು ಭಾವಿಸಿ ವರ್ತಿಸಿದ್ದು ಅವರ ಈ ಸ್ಥಿತಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ದ್ವೇಷ ಕಾರುವ ಭಾಷಣ,ನಾಯಕರ ವಿರುದ್ಧ ಮಾಡಿದ ವೈಯುಕ್ತಿಕ ಮಟ್ಟದ ದಾಳಿ ಪ್ರಜ್ಞಾವಂತರ ಬೇಸರಕ್ಕೆ ಕಾರಣವಾಯಿತು.
ಇದಷ್ಟೇ ಅಲ್ಲ ಪಕ್ಷದ ಮಟ್ಟದಲ್ಲೂ ಕೂಡ ಎಲ್ಲರನ್ನು ಟೀಕಿಸುವ ಮೂಲಕ ತಾವು ಅತ್ಯಂತ ದೊಡ್ಡ ನಾಯಕ ಎಂದು ತಮ್ಮಷ್ಟಕ್ಕೆ ತಾವು ಬಿಂಬಿಸಿಕೊಳ್ಳಲು ತೊಡಗಿದ್ದು ಇವರಿಗೆ ಮುಳುವಾಯಿತು.
ಬಿಜೆಪಿಯಲ್ಲಿ ವಂಶಪಾರಂಪರ್ಯ ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಹೇಳುತ್ತಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾದರು
ಇವರ ಇಂತಹ ಹೇಳಿಕೆಗಳು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಪರಿಣಾಮ ಬೀರಿದವು ಉರಿಗೌಡ ನಂಜೇಗೌಡ ಸೇರಿದಂತೆ ಹಲವು ವಿವಾದಗಳು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಶ್ರೀ ಸೇರಿದಂತೆ ಹಲವರ ಅಸಮಾಧಾನಕ್ಕೆ ಕಾರಣವಾದವು. ಇದರ ಪರಿಣಾಮ ಚುನಾವಣೆಯಲ್ಲಿ ಸಿ.ಟಿ. ರವಿ ಸೋಲು ಅನುಭವಿಸಬೇಕಾಯಿತು.
ಚುನಾವಣೆಯಲ್ಲಿ ಸೋತ ನಂತರ ಇವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಯಿತು ಇದಾದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಗೊಂಡು ಆ ಸ್ಥಾನದ ಪ್ರಬಲ ಆಕಾಂಕ್ಷಿ ಯಾದ ಸಿ ಟಿ ರವಿ ಅದಕ್ಕಾಗಿ ಸಾಕಷ್ಟು ಲಾಭಿ ನಡೆಸಿದರು.
ದೆಹಲಿ ಮಟ್ಟದಲ್ಲಿ ಹಲವು ನಾಯಕರನ್ನು ಭೇಟಿ ಮಾಡಿ ತಮ್ಮನ್ನು ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವಂತೆ ಮನವಿ ಮಾಡಿದ್ದಷ್ಟೇ ಅಲ್ಲದೆ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ನೇಮಕಕ್ಕೆ ಅಪಸ್ವರ ಎತ್ತಿದರು.
ಆದರೆ,ಹೈಕಮಾಂಡ್ ಸಿ.ಟಿ. ರವಿ ಅವರ ಬದಲಿಗೆ ವಿಜಯೇಂದ್ರ ಅವರಿಗೆ ಮನ್ನಣೆ ನೀಡಿದಾಗ ಬೇಸರಗೊಂಡ ಸಿ.ಟಿ. ರವಿ ಮಾಡಿದ ಟೀಕೆಗಳು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದವು.
ಇದೀಗ ಪಕ್ಷದಲ್ಲಿ ಯಾವುದೇ ಹುದ್ದೆ ಇಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿರುವ ಇವರಿಗೆ ಪಕ್ಷದ ಯಾವುದೇ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗುತ್ತಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಬಹುದೇ ಹೊರತು ನಿರ್ಣಾಯಕ ಸಭೆಗಳಲ್ಲಿ ಭಾಗವಹಿಸಿ ಅಭಿಪ್ರಾಯ ಹೇಳಲು ಸಾಧ್ಯವಿಲ್ಲದಾಗಿದೆ.
ಪಕ್ಷದಲ್ಲಿ ಏಕಾಏಕಿ ಅತ್ಯಂತ ಉನ್ನತ ಹುದ್ದೆಯಿಂದ ಪ್ರಪಾತಕ್ಕೆ ಬಿದ್ದ ಇವರು ಪುಟಿದೇಳಲು ನಡೆಸಿದ ಪ್ರಯತ್ನಗಳು ಫಲ ನೀಡುತ್ತಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರಿಗೆ ಆಪ್ತರಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅವರ ಮೂಲಕ ಪಕ್ಷದಲ್ಲಿ ಪ್ರಾಬಲ್ಯಕ್ಕೆ ಬರಲು ನಡೆಸಿದ ಪ್ರಯತ್ನ ಕೂಡ ಯಶಸ್ಸು ಕೊಡಲಿಲ್ಲ ಹೀಗಾಗಿ ಸಿಟಿ ರವಿ ಅವರು ಆಡುತ್ತಿರುವ ಮಾತುಗಳಿಗೆ ಈಗ ಯಾವುದೇ ಮಾನ್ಯತೆ ಇಲ್ಲದಂತಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಅವರ ಸ್ಥಿತಿ ನಡೆಯದ ನಾಣ್ಯದಂತಾಗಿದೆ.