ಬೆಂಗಳೂರು,ಫೆ.9-
ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ಹಾಗೂ ಶ್ರೇಣಿ ಕುರಿತಾದ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದ್ದು,ರಾಜ್ಯ
ಆಂತರಿಕ ಭದ್ರತೆ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರತಾಪ್ ರೆಡ್ಡಿ ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಬರುವ ಮೇ ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಡಿಜಿಪಿ ಪ್ರತಾಪ್ ರೆಡ್ಡಿ ಅವರು ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಸರಿ ಸಮಾನವಾದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರ ನಿವೃತ್ತಿಗೆ ಕೆಲವೇ ತಿಂಗಳ ಮೊದಲು ವೈಯಕ್ತಿಕ ಕಾರಣವನ್ನು ನೀಡಿ ಸ್ವಯಂ ನಿವೃತ್ತಿ ಕೋರಿ ಏಪ್ರಿಲ್ 30ಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೂಲಗಳ ಪ್ರಕಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ) ಅಲೋಕ್ ಮೋಹನ್ ಅವರು ಇವರಿಗೆ ಸೇವೆಯ ಕುರಿತಂತೆ ಮೆಮೋ ನೀಡಿದರು ಎಂಬ ಕಾರಣಕ್ಕೆ ಕೋಪಗೊಂಡ ಪ್ರತಾಪ್ ರೆಡ್ಡಿ ಸ್ವಯಂ ನಿವೃತ್ತಿ ಕೋರಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರಮುಖ ಕಾರಣ ತಮ್ಮದೇ ದರ್ಜೆಯ ಅಧಿಕಾರಿ ತಾಂತ್ರಿಕ ಕಾರಣದಿಂದ ಉನ್ನತ ಹುದ್ದೆಯಲ್ಲಿದ್ದೇನೆ ಎಂಬ ಕಾರಣಕ್ಕೆ ಸಮಾನ ದರ್ಜೆಯ ಅಧಿಕಾರಿಗೆ ಮೆಮೋ ನೀಡುವುದನ್ನು ಬಹುತೇಕ ಅಧಿಕಾರಿಗಳು ಇಷ್ಟಪಡುವುದಿಲ್ಲ.ಇದು ತಮಗೆ ಮಾಡುವ ಅಪಮಾನ ಎಂದೇ ಭಾವಿಸುತ್ತಾರೆ.
ಸದ್ಯ ಪ್ರತಾಪ್ ರೆಡ್ಡಿ ನಿರ್ವಹಿಸುತ್ತಿರುವ ಆಂತರಿಕ ಭದ್ರತಾ ವಿಭಾಗ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಸರಿ ಸಮಾನವಾದ ಹುದ್ದೆಯಾಗಿದೆ.
ಅಲೋಕ್ ಮೋಹನ್ ಹಾಗೂ ಪ್ರತಾಪ್ ರೆಡ್ಡಿ ಇಬ್ಬರು ಡಿಜಿಪಿಗಳಾಗಿದ್ದು ಮೆಮೋ ನೀಡಿದ್ದರಿಂದ ಬೇಸರಗೊಂಡು ಪ್ರತಾಪ್ ರೆಡ್ಡಿ
ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಾಪ್ ರೆಡ್ಡಿ ಅವರು ಈ ಹಿಂದೆ ಬೆಂಗಳೂರುನಗರ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯದ ಪೊಲೀಸ್ ಆಡಳಿತದ ವಿವಿಧ ಹುದ್ದೆಗಳನ್ನು ನಿಭಾಯಿಸಿರುವ ಹಿರಿಯ ಐಪಿಎಸ್ ಅಧಿಕಾರಿ ಸಿ. ಹೆಚ್ ಪ್ರತಾಪ್ ರೆಡ್ಡಿ ಅವರು ಜು. 01 1964ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಸಿದರು.
ಪ್ರತಾಪ್ ರೆಡ್ಡಿ ಬಿ.ಟೆಕ್ ಪದವೀಧರರಾಗಿದ್ದು, 1991ರಲ್ಲಿ ಕರ್ನಾಟಕ ಕೆಡರ್ನ ಐಪಿಎಸ್ ಅಧಿಕಾರಿಯಾಗಿ ಕಾರ್ಯವನ್ನು ಆರಂಭಿಸಿದರು. ಕರ್ನಾಟಕದಲ್ಲಿ ಹಾಸನ ಜಿಲ್ಲೆಯಲ್ಲಿ ಸಹಾಯಕ ಸೂಪರಿಟೆಂಡೆಂಟ್ ಆಗಿ ಪ್ರತಾಪ್ ರೆಡ್ಡಿ ಅವರು ಕೆಲಸ ಆರಂಭಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಪಿಯಾಗಿ, ಸಿಐಡಿಯಾಗಿ ಹಲವಾರು ಮಹತ್ವದ ಪ್ರಕರಣಗಳನ್ನು ಭೇದಿಸಿದ್ದಾರೆ.
ಪ್ರತಾಪ್ ರೆಡ್ಡಿ ಅವರು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಮುಂಬೈ ಮತ್ತು ಬೆಂಗಳೂರು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಬ್ಯಾಂಕಿಂಗ್ ಮತ್ತು ಸೈಬರ್ ಸೆಕ್ಯುರಿಟಿ ವಿಭಾಗದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಪ್ರತಾಪ್ ರೆಡ್ಡಿ ಅವರನ್ನು ಕಮಲ್ ಪಂತ್ ಅವರ ಬಳಿಕ ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿತ್ತು.ಅತ್ಯುತ್ತಮ ಸೇವೆಗಾಗಿ ಪ್ರತಾಪ್ ರೆಡ್ಡಿ ಅವರು ರಾಷ್ಟ್ರಪತಿ ಪದಕ ಮತ್ತು ಮುಖ್ಯಮಂತ್ರಿ ಪದಕ ಪಡೆದಿದ್ದಾರೆ.