ಬೆಂಗಳೂರು,ಫೆ.27- ದೇಶದಲ್ಲಿ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯಗಳಲ್ಲಿ
ಕರ್ನಾಟಕ ಮೂರನೇ ಸ್ಥಾನ ಪಡೆದಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯದಲ್ಲಿ ಸೈಬರ್ ವಂಚನೆಯಲ್ಲಿ ನಿತ್ಯ 1 ಕೋಟಿ ರೂ.ಗೂ ಹೆಚ್ಚು ಹಣ ಕಳೆದು ಕೊಳ್ಳುತ್ತಿರುವುದು ಅಂಕಿ ಅಂಶಗಳಿಂದ ಕಂಡುಬಂದಿದೆ.
ಕಳೆದ 2019 ರಿಂದ 2023ರ ಜನವರಿ ಅಂತ್ಯದವರೆಗಿನ ಸೈಬರ್ ವಂಚನೆಯಲ್ಲಿ ಕಳೆದುಕೊಂಡ ಹಣದ ಲೆಕ್ಕದ ಕುರಿತು ರಾಜ್ಯ ಪೊಲೀಸ್ ಇಲಾಖೆ ವಿಧಾನ ಪರಿಷತ್ ಕಲಾಪದಲ್ಲಿ ನೀಡಿರುವ ಅಧಿಕೃತ ಮಾಹಿತಿಯಲ್ಲಿ ಈ ಅಂಶ ಬಹಿರಂಗವಾಗಿದೆ.
ಒಟಿಪಿ, ಕ್ರಿಪ್ಟೋ ಕರೆನ್ಸಿ ಹೂಡಿಕೆ, ಲಕ್ಕಿ ಡ್ರಾ, ಸಾಲ ನೀಡಿಕೆ, ಸ್ಕಿಮ್ಮಿಂಗ್, ಉಡುಗೊರೆ ನೆಪ, ಕ್ಯೂ ಆರ್ ಕೋಡ್ ಸ್ಕ್ಯಾನ್ ಸೇರಿ ಹತ್ತು ಹಲವು ವಂಚನಾ ಮಾರ್ಗಗಳ ಮೂಲಕ ಕಳೆದ ವರ್ಷ 363 ಕೋಟಿ ರೂ.ಗಳನ್ನು ವಂಚಕರು ಲಪಟಾಯಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ722 ಕೋಟಿ ರೂ. ವಂಚಕರ ಪಾಲಾಗಿದೆ. ಈ ಪೈಕಿ ಐಟಿ ಹಬ್ ಬೆಂಗಳೂರಿನಲ್ಲಿಯೇ 446 ಕೋಟಿ ರೂ.ಗಳಿಗೂ ಅಧಿಕ ಹಣ ಲೂಟಿ ಮಾಡಲಾಗಿದೆ. ಹಣ ಕಳೆದುಕೊಂಡವರಲ್ಲಿ ರಾಜಧಾನಿ ಬೆಂಗಳೂರು ಜನರದ್ದೇ ಸಿಂಹಪಾಲಾಗಿದೆ. ಉಳಿದಂತೆ ಮೈಸೂರು, ಮಂಡ್ಯ ಜಿಲ್ಲೆಗಳು ನಂತರದ ಸ್ಥಾನ ಪಡೆದಿವೆ.
ಕ್ಷಣಾರ್ಧದಲ್ಲಿ ನಾಗರಿಕರ ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿರುವ ಆರೋಪಿಗಳಿಂದ ಹಣ ರಿಕವರಿ ಮಾಡುವುದೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಪೊಲೀಸರು ಹರಸಾಹಸಪಟ್ಟು 116 ಕೋಟಿ ರೂ.ರಿಕವರಿ ಮಾಡಲು ಸಫಲರಾಗಿದ್ದಾರೆ. ಉಳಿದ ಹಣ ರಿಕವರಿಯೇ ಕಷ್ಟಸಾಧ್ಯ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೈಬರ್ ವಂಚಕರಲ್ಲಿ ಬಹುತೇಕರು ಗುರುತು ಮರೆಮಾಚಿಯೇ ಕೃತ್ಯ ಎಸಗುತ್ತಾರೆ. ಜತೆಗೆ, ಉತ್ತರ ಭಾರತದ ರಾಜಸ್ಥಾನ, ಜಾರ್ಖಂಡ್, ಹರಿಯಾಣ ಸೇರಿ ಇನ್ನಿತರೆ ರಾಜ್ಯಗಳು ಹಾಗೂ ಹೊರದೇಶಗಳಲ್ಲಿದ್ದುಕೊಂಡೇ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ನಕಲಿ ಸಿಮ್ ಕಾರ್ಡ್, ಬೇರೊಬ್ಬರ ಬ್ಯಾಂಕ್ ಖಾತೆಗಳನ್ನು ವಂಚನೆಗೆ ಬಳಸಿ ಹಣ ಕ್ರೆಡಿಟ್ ಆದ ಕೆಲವೇ ಕ್ಷಣಗಳಲ್ಲಿಬೇರೆ ಬೇರೆ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದು,ಈ ಅಂಶಗಳು ಹಣ ರಿಕವರಿಗೆ ತೊಡಕುಂಟಾಗಿದೆ. ಅಷ್ಟೇ ಅಲ್ಲದೆ ಸೈಬರ್ ಅಪರಾಧ ಪ್ರಕರಣಗಳ ಸಂತ್ರಸ್ತರು ದೂರು ಸಲ್ಲಿಸಲು ವಿಳಂಬ ಮಾಡುವುದು ಕೂಡ ನಷ್ಟ ಉಂಟಾದ ಹಣ ಜಪ್ತಿ ಮಾಡಲು ಕಠಿಣವಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಆರೋಪಿಗಳ ಪತ್ತೆ ಕಷ್ಟ:
ಹಲವು ವಂಚನಾ ಮಾರ್ಗಗಳಲ್ಲಿಹಣ ದೋಚುವ, ಮಹಿಳೆಯರಿಗೆ ಕಿರುಕುಳ ಕೊಟ್ಟಿರುವ ಸೈಬರ್ ಆರೋಪಿಗಳ ಬಂಧನವೂ ಅತಿ ಕಡಿಮೆ ಪ್ರಮಾಣವಿದೆ. ಪೊಲೀಸ್ ಇಲಾಖೆ ಮೂರು ವರ್ಷಗಳಲ್ಲಿ11,125 ಸೈಬರ್ ಕ್ರೈಂ ಆರೋಪಿಗಳನ್ನು ಗುರುತು ಮಾಡಿದೆ.ಆದರೆ, ಕೇವಲ 1503 ಆರೋಪಿಗಳನ್ನಷ್ಟೇ ಬಂಧಿಸಲಾಗಿದೆ. ಈ ಪೈಕಿ 2020ರಲ್ಲಿ584 ಮಂದಿ ಆರೋಪಿಗಳನ್ನು ಬಂಧಿಸಿರುವುದು ಇದುವರೆಗಿನ ಗಣನೀಯ ಕೆಲಸವಾಗಿದೆ.
ನಕಲಿ ದಾಖಲೆ ಬಳಕೆ:
ಸಾಮಾನ್ಯ ಅಪರಾಧ ಪ್ರಕರಣಗಳಿಗಿಂತ ಸೈಬರ್ ಕ್ರೈಂ ಕೇಸ್‌ಗಳ ತನಿಖೆ ವಿಭಿನ್ನವಾಗಿರಲಿದೆ. ಶೇ. 75ರಷ್ಟು ತನಿಖಾ ಪ್ರಕ್ರಿಯೆ ತಾಂತ್ರಿಕ ನೈಪುಣ್ಯದಿಂದಲೇ ಕೂಡಿರಲಿದೆ. ಆರೋಪಿಗಳು ಬಳಸಿದ ಮೊಬೈಲ್ ನಂಬರ್, ಕಂಪ್ಯೂಟರ್‌ನ ಐಪಿ ವಿಳಾಸ, ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಬೇಕು. ಬಹುತೇಕ ಕೇಸ್‌ಗಳಲ್ಲಿಈ ಎಲ್ಲಾದಾಖಲೆಗಳು ಆರೋಪಿಯಲ್ಲದವರ ಹೆಸರಿನಲ್ಲಿಯೇ ಇರುತ್ತವೆ. ನಕಲಿ ದಾಖಲೆಗಳನ್ನು ಬಳಸಿಯೇ ಆರೋಪಿ ಕೃತ್ಯ ಎಸಗಿರುತ್ತಾನೆ. ಹೀಗಾಗಿ, ಪ್ರಕರಣದ ನೈಜ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ವಿಳಂಬವಾಗಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
Previous Articleಪೊಲೀಸ್ ಠಾಣೆ ಮೆಟ್ಟಿಲೇರಿದ ಪರಮೇಶ್ವರ್
Next Article Dangerous ವ್ಯಕ್ತಿ Mumbai ಪ್ರವೇಶ- ಕಟ್ಟೆಚ್ಚರಕ್ಕೆ ಸೂಚನೆ