ಬೆಂಗಳೂರು, ಸೆ.12- ಯೋಜನಾ ಸಚಿವ ಡಿ.ಸುಧಾಕರ್ ಸಂಕಷ್ಟಕ್ಕೆ ಸಿಲುಕಿದ್ದಾರೆ.ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಸಚಿವ ಸುಧಾಕರ್ ಅವರು ಹೇ ಕೇಳಮ್ಮ ಮಾದಕ್ಕ ಕೇಳು. ಹೇ ಕೇಳಮ್ಮ ಸುಮ್ಮನೆ ನಂಗೆ ರೇಗಿಬಿಡುತ್ತೆ ನನ್ನತ್ರ ಗಾಂಚಾಲಿ, ಗಿಂಚಾಲಿ ಎಲ್ಲ ನಡೋಯಲ್ಲ. ಆಂಧ್ರದಲ್ಲಿ ಮಚ್ಚು ಕೊಡಲಿ ಇಟ್ಕೊಂಡು ಓಡಾಡಿದ್ದೀನಿ. ಯಲಹಂಕ ಏನು ದೊಡ್ಡದಲ್ಲ ಎಂದು ಹೇಳಿದ್ದಾರೆ.
ಈ ಕುರಿತಂತೆ ಡಿ.ಸುಧಾಕರ್ ಅವರ ವಿರುದ್ಧ ಯಕಹಂಕ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಹಾಗೂ ಇತರೆ ಆರೋಪಗಳ ದೂರು ದಾಖಲಾಗಿದ್ದು ಎಫ್ಐಆರ್ ಹಾಕಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಇದೀಗ ಡಿ.ಸುಧಾಕರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ ಜಾಲತಾಣಗಳಲ್ಲಿ ಲಭ್ಯವಿರುವ ಸುಧಾಕರ್ ಬೆದರಿಕೆಯ ವಿಡಿಯೋ ಲಗತ್ತಿಸಿ ಟ್ವೀಟ್ ಮಾಡಿರುವ ಬಿಜೆಪಿ, ಯಾವ ಪುಡಿ ರೌಡಿಗಿಂತಲೂ ಕಡಿಮೆ ಇಲ್ಲ ಸಚಿವ ಡಿ. ಸುಧಾಕರ್ ಅವರ ಗೂಂಡಾವರ್ತನೆ ಎಂದು ಹೇಳಿದೆ.
ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಜಾತಿ ನಿಂದಕರು, ಗೂಂಡಾಗಳೇ ತುಂಬಿ ತುಳುಕುತ್ತಿದ್ದಾರೆ.
ಸಿದ್ದರಾಮಯ್ಯ ಅವರಿಗೆ ದಲಿತರನ್ನು ಮೂಲೆಗುಂಪು ಮಾಡುವುದು ಕರಗತವಾದರೆ, ಸಚಿವ ಡಿ. ಸುಧಾಕರ್ ಅವರಿಗೆ ದಲಿತರನ್ನು ಅವಮಾನಿಸಿ ಗೂಂಡಾಗಿರಿ ಮಾಡುವ ಅಹಂ ಸಿದ್ಧಿಸಿದೆ ಎಂದು ಆಪಾದಿಸಿದೆ.
ಈ ಬೆಳವಣಿಗೆ ನಡುವೆ ಸಚಿವ ಸುಧಾಕರ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯಮಂತ್ರಿ ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಪ್ರಕರಣದ ಕುರಿತು ವಿವರಣೆ ನೀಡಿದ್ದಾರೆ.
ಹಳೆಯ ವಿಡಿಯೋ:
ನಂತರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಸಾಮಾಜಿಕ ಜಾಲತಾಣದಲ್ಲಿ ಲಭ್ಯ ಇರುವ ವಿಡಿಯೋ ಹಳೆಯದು ಈಗ ಪ್ರಸಾರವಾಗುತ್ತಿರುವ ವಿಡಿಯೋಗಳ ತುಣಕನ್ನು ಒಂದಕ್ಕೊಂದು ಜೋಡಿಸಲಾಗಿದೆ ಎಂದು ಹೇಳಿದರು.
ಘಟನೆ ನಡೆದ ದಿನ ನಾನು ಚಿತ್ರದುರ್ಗದಲ್ಲಿದ್ದೆ. ನನಗೂ, ಅದಕ್ಕೂ ಸಂಬಂಧವಿಲ್ಲ ನನ್ನ ಮಾತುಗಳಿಗೆ ಮೊದಲು ದೂರುದಾರರು ಯಾವ ರೀತಿ ಪ್ರಚೋದನಕಾರಿಯಾಗಿ ನಡೆದುಕೊಂಡರು ಎಂಬುದನ್ನು ನಡೆಸಿಕೊಳ್ಳಬೇಕು. ಸದ್ಯಕ್ಕೆ ತಮಗೆ ನೆನಪಿಲ್ಲ ಎಂದರು.
ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ತಾವು ಹೆದರಿಕೊಂಡೇ ಕಾನೂನಿನ ಚೌಕಟ್ಟಿನಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಏಕಾಏಕಿ ಈ ಹಂತಕ್ಕೆ ಬಂದಿಲ್ಲ. ಕಷ್ಟಪಟ್ಟು ಬೆಳೆದಿದ್ದೇನೆ. ನಾನು ಸಚಿವನಾದಾಗಲೆಲ್ಲಾ ಈ ರೀತಿಯ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. 2008 ರಲ್ಲಿ ಸಚಿವನಾಗಿದ್ದಾಗ ಸಿಬಿಐ ಕೇಸು ಹಾಕಿಸಿದ್ದರು. ಅದು ನ್ಯಾಯಾಲಯದಲ್ಲಿ ಊರ್ಜಿತವಾಗಲಿಲ್ಲ ಎಂದು ತಿಳಿಸಿದರು.
ತಮ್ಮನ್ನು ಶಾಸಕರನ್ನಾಗಿ ಮಾಡಿದ್ದೇ ನನ್ನ ರಾಜಕೀಯ ಗುರು ಕೆ.ಎಚ್. ರಂಗನಾಥ್. ಇಂತದ್ದರಲ್ಲಿ ನಾನು ಪರಿಶಿಷ್ಟ ಸಮುದಾಯಗಳ ಜಾತಿನಿಂದನೆ ಮಾಡಲು ಸಾಧ್ಯವೇ? ಅನಗತ್ಯವಾದ ತೇಜೋವಧೆಗಳು ಮನಸ್ಸಿಗೆ ನೋವುಂಟು ಮಾಡುತ್ತವೆ. ನಾನು ಯಾರ ಜಾತಿನಿಂದನೆಯೂ ಮಾಡಿಲ್ಲ, ಭೂಮಿಯನ್ನೂ ಕಬಳಿಸಿಲ್ಲ. ನನ್ನ ಮೇಲಿನ ಆರೋಪಗಳು ಸಂಪೂರ್ಣ ನಿರಾಧಾರ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ನನ್ನ ಪರವಾದ ಸಮರ್ಥನೆಗಳನ್ನು ದಾಖಲೆ ಸಮೇತ ನೀಡಿದ್ದೇನೆ. ಹತ್ತು-ಹದಿನೈದು ವರ್ಷಗಳ ಹಿಂದೆ ನಡೆದ ಜಮೀನು ಖರೀದಿ ವ್ಯವಹಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈಗ ಅದನ್ನು ಮುನ್ನೆಲೆಗೆ ತಂದು ಕೇಸು ಹಾಕಿಸಲಾಗಿದೆ.
ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿದ್ದೇನೆ. ನನ್ನ ವಿರುದ್ಧ ಕೇಳಿಬಂದಿರುವ ಭೂಕಬಳಿಕೆಯ ಆರೋಪಕ್ಕೆ ಒಂದೇ ಒಂದು ದಾಖಲೆಗಳಿಲ್ಲ. ಆದರೂ ನಿರಂತರವಾಗಿ ತೇಜೋವಧೆ ಮಾಡಲಾಗುತ್ತಿದೆ ಎಂದು ಹೇಳಿದರು.