ಮೈಸೂರು, ಅ.22- ಸಾಂಪ್ರದಾಯಿಕವಾಗಿ ಅದ್ದೂರಿಯಿಂದ ನಡೆಯುತ್ತಿರುವ ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾಗೆ (Mysore Dasara) ಈ ಬಾರಿ ಉಗ್ರರ ಕರಿನೆರಳು ಆವರಿಸಿದೆ.
ವಿಶ್ವ ವಿಖ್ಯಾತ ಜಂಬೂಸವಾರಿ ಸಮಯದಲ್ಲಿ ವಿಧ್ವಂಸಕಕ್ಕೆ ಉಗ್ರರು ಸಂಚು ಮಾಡಿದ್ದಾರೆ ಎಂಬುದಾಗಿ ಗುಪ್ತಚರ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದ್ದು ಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ.
ಉಗ್ರರ ಕರಿನೆರಳು ಬಿದ್ದಿರುವ ಮಾಹಿತಿಯು ಬಂದಿರುವ ಬೆನ್ನಲ್ಲೇ ಮೈಸೂರು ನಗರದಲ್ಲಿ ಅತಿ ಹೆಚ್ಚು ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಿ ಹಿಂದೆಂದೂ ಕಂಡರಿಯದ ಭದ್ರತೆಯನ್ನು ಒದಗಿಸಲಾಗಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಕಣ್ತುಂಬಿಕೊಳ್ಳಲು ಹೊರರಾಜ್ಯಗಳಿಂದ ಮಾತ್ರವಲ್ಲದೆ ದೇಶ-ವಿದೇಶಗಳಿಂದ ರಾಜ್ಯ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ.ಹೀಗಿರುವಾಗ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಯನ್ನು ಹೆಚ್ಚಿಸಿ ಹಿರಿಯ ಪೊಲೀಸರು ಅಧಿಕಾರಿಗಳು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸುತ್ತಾರೆ.
ಆದರೆ ಈ ಬಾರಿ ನಾಡಹಬ್ಬದ ಮೇಲೆ ಉಗ್ರರ ಕರಿನೆರಳು ಬಿದ್ದಿರುವ ಮಾಹಿತಿಯ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ) ಅಲೋಕ್ ಮೋಹನ್ ಅವರು ತುರ್ತು ಸಭೆ ನಡೆಸಿದರು.
ಇದಾದ ಬಳಿಕ ಭದ್ರತೆಗಾಗಿ 1568 ಮಂದಿ ಹೆಚ್ಚುವರಿ ಪೊಲೀಸರು, ಜೊತೆಗೆ 40 ಸಿಎಆರ್ ತುಕಡಿಗಳು, 30 ರಾಜ್ಯ ಮೀಸಲು ಪಡೆಯ ತುಕಡಿಗಳನ್ನು ನಿಯೋಜಿಸಲಾಯಿತು.
ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಿ ದೇಶ-ವಿದೇಶಗಳಿಂದ ಅಲ್ಲದೇ ರಾಜ್ಯ ಹೊರರಾಜ್ಯಗಳಿಂದ ಲಕ್ಷಾಂತರ ಪ್ರವಾಸಿಗರ ಮೇಲೆ ನಿಗಾ ವಹಿಸಿದ್ದಾರೆ. ರೈಲ್ವೆ ನಿಲ್ದಾಣ,ಬಸ್ ನಿಲ್ದಾಣ ಸೇರಿ ಜನನಿಬಿಡ ಪ್ರದೇಶದಲ್ಲಿ ಅನುಮಾನಸ್ಪದ ವ್ಯಕ್ತಿಗಳು ವಸ್ತುಗಳ ತಪಾಸಣೆ ತೀವ್ರಗೊಳಿಸಲಾಗಿದೆ ಜನಸಾಮಾನ್ಯರ ಉಡುಪಿನಲ್ಲಿ ಕೆಲವರು ಪೊಲೀಸರು ಸಂಚರಿಸುತ್ತಾ ಪರಿಸ್ಥಿತಿಯ ನಿಗಾ ವಹಿಸಿದ್ದಾರೆ.
ಉಗ್ರರ ಕರಿನೆರಳು:
ಪ್ರತಿ ಬಾರಿ ದಸರಾಗೆ 1700 ರಿಂದ 2000 ಪೊಲೀಸರ ನಿಯೋಜಿಸಲಾಗುತ್ತಿತ್ತು. ಈ ಬಾರಿ ಭದ್ರತೆಗೆ 3500ಕ್ಕೂ ಹೆಚ್ಚು ಪೊಲೀಸರು, ರಾಜ್ಯದ ಎಲ್ಲಾ ವಲಯ, ಸಿಐಡಿ, ಐಎಸ್ಡಿಯಿಂದಲೂ ನಿಯೋಜನೆ ಮಾಡಲಾಗಿದೆ. ಶ್ರೀರಂಗಪಟ್ಟಣ,ಕೆಆರ್ ಎಸ್ ಗೂ ಬಳಿಯಲ್ಲೂ ಪೊಲೀಸರಿಗೂ ಕಟ್ಟೆಚ್ಚರ ಇರುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ.
ಸುಮಾರು 70 ಜನರು ಅಕ್ರಮವಾಗಿ ದೇಶದೊಳಗೆ ನುಸುಳಿರುವ ಮಾಹಿತಿ ಲಭ್ಯವಾಗಿದೆ. ನಕಲಿ ಪಾಸ್ ಪೋರ್ಟ್ ಪಡೆದು ಅಂದಾಜು 70 ಜನರು ಅಕ್ರಮವಾಗಿ ದೇಶದೊಳಗೆ ನುಸುಳಿರುವ ಮಾಹಿತಿಯನ್ನು ಕೇಂದ್ರ ಐಬಿ ಟೀಂ ಮಾಹಿತಿ ಕಲೆಹಾಕಿದೆ. ಒಂದು ಕಡೆ ಕ್ರಿಕೆಟ್ ಮ್ಯಾಚ್, ಮತ್ತೊಂದು ಕಡೆ ದಸರಾ ಉತ್ಸವ ನಡೆಯುತ್ತಿದೆ. ಈ ಹಿನ್ನಲೆ ಕ್ರಿಕೆಟ್ ಜೊತೆಗೆ ದಸರಾಕ್ಕೂ ಬಂದೋಬಸ್ತ್ ಹೆಚ್ಚಿಸುವಂತೆ ಸೂಚಿಸಿದೆ.