ಬೆಂಗಳೂರು, ನ.13- ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ನರೇಂದ್ರ ಮೋದಿ ಮತ್ತೆ ದೇಶದ ಪ್ತಧಾನಿಯಾಗಬೇಕು.ಈ ನಿಟ್ಟಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಹೋಗಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷರಿಗೆ ಹೇಳಿರುವ ಕಿವಿಮಾತು.
ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿಜಯೇಂದ್ರ (Vijayendra) ಅವರು,ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಕೋರಿದರು. ಈ ವೇಳೆ,ಯಡಿಯೂರಪ್ಪ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಸಂಘಟನೆಗೆ ಶಕ್ತಿ ತುಂಬಿದ ಮಾದರಿಯಲ್ಲಿ ನೀನು ಕೂಡ ಯಶಸ್ವಿ ಆಗುವಂತೆ ಸಲಹೆ ಮಾಡಿದರು.
ಈ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೊತೆ ಬಿ.ವೈ.ವಿಜಯೇಂದ್ರ (Vijayendra) ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟಿದೆ. ಇದರಿಂದಾಗಿ ಯಾವುದಾದರೂ ಸಮಸ್ಯೆಗಳಿದ್ದರೆ ಬಗೆಹರಿಸಿಕೊಂಡು ಹೋಗಬೇಕು ಯಾವುದೇ ಗೊಂದಲಕ್ಕೆ ಅವಕಾಶ ಮಾಡಿ ಕೊಡದೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನವನ್ನು ಗೆಲ್ಲಬೇಕು. ಇದು ದೇಶದ ಭವಿಷ್ಯ ನಿರ್ಮಾಣದ ಚುನಾವಣೆ. ಯುವಕರು ಹೆಚ್ಚು ಹೆಚ್ಚಾಗಿ ಮುಂದೆ ಬರಬೇಕೆಂದು ದೇವೇಗೌಡರು ಆಶೀರ್ವಾದ ಮಾಡಿದ್ದಾರೆ ಎಂದು ವಿವರಿಸಿದರು.
ಬಿಜೆಪಿಯಂತಹ ದೊಡ್ಡ ರಾಷ್ಟ್ರೀಯ ಪಕ್ಷದಲ್ಲಿ ಇಷ್ಟು ಚಿಕ್ಕ ವಯಸ್ಸಿಗೇ ದೊಡ್ಡ ಜವಾಬ್ದಾರಿ ಕೊಟ್ಟ ಬಗ್ಗೆ ಅವರು ಹೆಮ್ಮೆ ಪಟ್ಟಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಯುವಕರು ಹೆಚ್ಚು ಹೆಚ್ಚಾಗಿ ರಾಜಕಾರಣದಲ್ಲಿ ಮುಂದೆ ಬರಬೇಕೆಂದು ಆಶೀರ್ವಾದ ಮಾಡಿದ್ದಾರೆ ಎಂದು ವಿವರಿಸಿದರು.
ದೇವೇಗೌಡರ ಭೇಟಿಯಿಂದ ತುಂಬಾ ಸಂತೋಷವಾಗಿದೆ. ರಾಜ್ಯದ ಮತ್ತು ದೇಶದ ಆಗುಹೋಗುಗಳ ಬಗ್ಗೆ ಅವರ ಚಿಂತನೆಗಳು ಪ್ರೇರಕ ಮತ್ತು ದೊಡ್ಡ ಶಕ್ತಿಯನ್ನು ಕೊಡುತ್ತದೆ ಎಂದು ವಿಶ್ಲೇಷಿಸಿದರು. ರಾಜ್ಯದಲ್ಲಿ ಹೋರಾಟ ಎಂಬ ಮಾತು ಬಂದಾಗ ದೇವೇಗೌಡರು ಮತ್ತು ಯಡಿಯೂರಪ್ಪ ಅವರನ್ನು ನೆನಪಾಗುತ್ತದೆ. ಅದನ್ನು ಕೂಡ ಅವರು ನೆನಪು ಮಾಡಿಕೊಂಡರು ಎಂದು ತಿಳಿಸಿದರು.