ಬೆಂಗಳೂರು, ಮಾ.18- ಮೊಬೈಲ್ ಅಂಗಡಿಯಲ್ಲಿ ಭಕ್ತಿಗೀತೆಯನ್ನು ಹಾಕಿದಕ್ಕೆ ಅಂಗಡಿಯ ಮಾಲೀಕನ ಮೇಲೆ ಯುವಕರ ಗುಂಪು ಕಿರಿಕ್ ತೆಗೆದು ಮನಸ್ಸೋ ಇಚ್ಛೆ ಹಲ್ಲೆ ಮಾಡಿರುವ ದುರ್ಘಟನೆ ಬೆಂಗಳೂರಿನ ನಗರ್ತ್ ಪೇಟೆಯಲ್ಲಿ ನಡೆದಿದೆ.
ಗಲಾಟೆ ಸಂಬಂಧ ಐವರನ್ನು ವಶಕ್ಕೆ ಪಡೆದಿದ್ದು, ಮತ್ತೆ ಮೂವರನ್ನು ಬಂಧಿಸಿರುವ ಹಲಸೂರು ಗೇಟ್ ಪೊಲೀಸರು ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಲಿದ್ದಾರೆ.
ಐದಾರು ಯುವಕರು ಗ್ಯಾಂಗ್ ಕಟ್ಟಿಕೊಂಡು ನಗರ್ತ ಪೇಟೆಯಲ್ಲಿರುವ ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ ಬಳಿ ಸಂಜೆ ಬಂದು ನಮಾಜ್ ಸಮಯದಲ್ಲಿ ಹನುಮಾನ್ ಚಾಲೀಸ್ ಹಾಕುತ್ತೀಯಾ ಎಂದು ಮಾಲೀಕನ ಜೊತೆ ಕಿರಿಕ್ ತೆಗೆದಿದ್ದರು.
ಈ ವೇಳೆ ಅಂಗಡಿ ಮಾಲೀಕ ಮುಖೇಶ್ ನನ್ನು ಅಂಗಡಿಯಿಂದ ಹೊರಗೆಳೆದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ಮುಖೇಶ್ ಕೂಡಲೇ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಆರಂಭದಲ್ಲಿ ಪೊಲೀಸರು ಎಫ್ಐಆರ್ ಮಾಡಲು ಹಿಂದೇಟು ಹಾಕುತ್ತಿದ್ದಾರೆಂದು ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ತಡರಾತ್ರಿ ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆ ನೂರಾರು ಜನರು ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಠಾಣೆ ಮುಂದೆ ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿತ್ತು. ಪೊಲೀಸರು ಎಫ್ಐಆರ್ ಮಾಡುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ, ಐವರು ಬಂಧಿಸಿದ್ದರು.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖೇಶ್, ಅಂಗಡಿಯಲ್ಲಿ ಭಜನೆ ಹಾಡುಗಳನ್ನು ಹಾಕುತ್ತಿದ್ದೆ. ಈ ವೇಳೆ ಅಂಗಡಿಗೆ ಬಂದ ಕೆಲ ಯುವಕರು ನಮಾಜ್ ಸಮಯದಲ್ಲಿ ಯಾಕೆ ಹಾಡು ಹಾಕುತ್ತೀಯಾ ಎಂದು ಪ್ರಶ್ನೆ ಮಾಡಿದರು. ಆರಂಭದಲ್ಲಿ ತಡೆಯುವ ಪ್ರಯತ್ನ ಮಾಡಿದೆ. ಆದರೆ ಸ್ಪೀಕರ್‌ನಿಂದ ನನ್ನ ತಲೆಗೆ ಹೊಡೆದು, ಎಳೆದಾಡಿ ಹಲ್ಲೆ ಮಾಡಿದರು.
ಒಟ್ಟು ಆರು ಮಂದಿ ಬಂದಿದ್ದರು. ಯಾರ್ಯಾರು ಎಂಬ ಹೆಸರು ಗೊತ್ತಿಲ್ಲ. ಈ ಮುಂಚೆ ನನಗೆ ಯಾವುದೇ ಪರಿಚಯ ಇಲ್ಲ. ಕಳೆದ ಎರಡು ತಿಂಗಳಿನಿಂದ ಅಂಗಡಿ ಇಟ್ಟಿದ್ದೇನೆ. ಮೊದಲಿನಿಂದಲೂ ಹಣ ಕೀಳಲು ಗದರಿಸುವ ಪ್ರಯತ್ನ ಮಾಡುತ್ತಿದ್ದರು. ನಾನು ಯಾವುದೇ ಹಣವನ್ನು ಕೊಡುತ್ತಿರಲಿಲ್ಲ. ನಿನ್ನೆ ಭಾನುವಾರ ಇದೇ ರಿವೆಂಜ್ ಇಟ್ಟುಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ಮುಖೇಶ್ ತಿಳಿಸಿದ್ದಾರೆ.