ಬೆಂಗಳೂರು,ಸೆ.9- ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಮಾಜಿ ಶಾಸಕರೊಬ್ಬರು ಡಿಜಿಟಲ್ ಬಂಧನದ ಬ್ಲಾಕ್ ಮೇಲ್ ಗೆ ಹೆದರಿ 31 ಲಕ್ಷ ಕಳೆದುಕೊಂಡು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ವಂಚಕರು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಹಣ ಪಡೆದಿದ್ದಾರೆ. ಇದು ಸಾಮಾನ್ಯ ವಂಚನೆಯಲ್ಲ. ಇದರಲ್ಲಿ ನ್ಯಾಯಾಲಯದ ನಾಟಕ, ವಾದ-ವಿವಾದಗಳು ಎಲ್ಲವೂ ಇವೆ. ಸೈಬರ್ ಕ್ರೈಂ ಪೊಲೀಸರು ಸೆಪ್ಟೆಂಬರ್ 6 ರಂದು ದೂರು ದಾಖಲಿಸಿಕೊಂಡಿದ್ದಾರೆ.
ಕಳೆದ ಆ.12 ರಂದು ಸಂಜೆ 6 ಗಂಟೆಗೆ ಶಾಸಕರಿಗೆ ಕರೆ ಮಾಡಿದ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಳ್ಳುತ್ತಾನೆ. ನೀವು ಮನಿ ಲಾಂಡರಿಂಗ್‌ನಲ್ಲಿ ಭಾಗಿಯಾಗಿದ್ದೀರಿ ಎಂದು ಆರೋಪಿಸಿಸುತ್ತಾನೆ.
ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಮೇಲೆ ದಾಳಿ ಮಾಡಿದಾಗ ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಗಳು ಮತ್ತು ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿವೆ ಎಂದು ಹೇಳಿ ಮುಂಬೈನಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದಾನೆ.
ಮೊದಲಿಗೆ ಇದು ವಂಚನೆ ಎಂದು ಶಾಸಕರಿಗೆ ಅನುಮಾನ ಬಂದಿತು. ಆದರೆ ಆ ವಂಚಕ ಅವರನ್ನು ಹೆದರಿಸಿ ತಾನೊಬ್ಬ ತನಿಖಾಧಿಕಾರಿ ಎಂದು ನಂಬಿಸಿದನು. ಸಾಕಷ್ಟು ಮಾತುಕತೆ ಬಳಿಕ ಆ ವಂಚಕ ನನ್ನ ಜೀವನ ಚರಿತ್ರೆ ಮತ್ತು ಆಸ್ತಿ ವಿವರಗಳನ್ನು ಪಡೆದುಕೊಂಡನು” ಎಂದು ಶಾಸಕರು ಪೊಲೀಸರಿಗೆ ತಿಳಿಸಿದರು. ನಂತರ ಆತ ಕರೆಯನ್ನು ಇನ್ನೊಬ್ಬ ಹಿರಿಯ ಅಧಿಕಾರಿಗೆ ವರ್ಗಾಯಿಸುತ್ತೇನೆ ಎಂದು ಹೇಳಿದನು. ನಂತರ ನೀರಜ್ ಕುಮಾರ್ ಎಂಬ ವ್ಯಕ್ತಿ ತಾನು ಡಿಸಿಪಿ ಎಂದು ಪರಿಚಯಿಸಿಕೊಂಡನು. ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಶಾಸಕರು ಕೇಳಿದಾಗ, ನೀರಜ್ ನಿಮ್ಮ ವಯಸ್ಸು ಮತ್ತು ಹಿನ್ನೆಲೆಯನ್ನು ಪರಿಗಣಿಸಿ, ನಾವು ವರ್ಚುವಲ್ ತನಿಖೆ ನಡೆಸುತ್ತೇವೆ ಮತ್ತು ನಿಮ್ಮನ್ನು ಡಿಜಿಟಲ್ ಬಂಧನದಲ್ಲಿ ಇರಿಸುತ್ತೇವೆ ಎಂದು ಹೇಳಿದನು.
ವಾಟ್ಸಾಪ್ ಕರೆಯ ಮೂಲಕ ಶಾಸಕರನ್ನು ಕಣ್ಗಾವಲಿನಲ್ಲಿ ಇರಿಸಲಾಗಿತ್ತು. ಇದು ಬಹಳ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಈ ಬಗ್ಗೆ ಯಾರಿಗೂ ಹೇಳದಂತೆ ವಂಚಕರು ಎಚ್ಚರಿಸಿದರು. ವಂಚಕರು ತಮ್ಮ ಐಡಿ ಕಾರ್ಡ್‌ಗಳು, ಬಂಧನ ವಾರೆಂಟ್ ಮತ್ತು ಅವರ ವಿರುದ್ಧ ದಾಖಲಾದ ಪ್ರಕರಣದ ಪ್ರತಿಯನ್ನು ತೋರಿಸಿದರು. ವೀಡಿಯೊ ಕರೆಯಲ್ಲಿ, ಅವರು ಪೊಲೀಸ್ ಠಾಣೆಯಂತೆ ಕಾಣುವ ಸೆಟಪ್ ಅನ್ನು ತೋರಿಸಿದರು.
ಹಣ ವರ್ಗಾವಣೆ:
ಮರುದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ, ವಂಚಕರು ಶಾಸಕರನ್ನು ವೀಡಿಯೊ ಕರೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಪೊಲೀಸರ ವಾದ ಮತ್ತು ಶಾಸಕರ ಹೇಳಿಕೆಯನ್ನು ಆಲಿಸಿದ ನಂತರ, ನ್ಯಾಯಾಧೀಶರು ನೀವು ವಂಚನೆ ಮಾಡಿಲ್ಲ ಎಂದು ಬರೆದುಕೊಡಿ ಎಂದು ಆದೇಶಿಸಿದರು.
ನಂತರ ನ್ಯಾಯಾಧೀಶರು ಪೊಲೀಸ್ ಅಧಿಕಾರಿಗಳು ಹೇಳಿದ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ 10.99 ಲಕ್ಷ ರೂ ವರ್ಗಾಯಿಸಲು ಆದೇಶಿಸಿದರು. ಶಾಸಕರು ಅದರಂತೆ ಹಣವನ್ನು ವರ್ಗಾಯಿಸಿದರು. ಆಗಸ್ಟ್ 14 ರಿಂದ, ನೀರಜ್ ಕುಮಾರ್ ಮತ್ತು ಸಂದೀಪ್ ಕುಮಾರ್ ಎಂಬ ಮತ್ತೊಬ್ಬ ಅಧಿಕಾರಿ ಪ್ರತಿದಿನ ಶಾಸಕರನ್ನು ವಿಚಾರಣೆಗೆ ಒಳಪಡಿಸಿದರು. ಅವರ ಕುಟುಂಬ ಸದಸ್ಯರು, ಅವರ ಬ್ಯಾಂಕ್ ಖಾತೆಗಳು ಮತ್ತು ಇತರ ವೈಯಕ್ತಿಕ ವಿವರಗಳನ್ನು ಪಡೆದುಕೊಂಡಿದ್ದಾರೆ.
ನಾಲ್ಕು ದಿನಗಳ ನಂತರ, ಅವರನ್ನು ಮತ್ತೆ ಕ್ಯಾಮೆರಾದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅವರ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ತನಿಖೆ ಮಾಡಲು 20 ಲಕ್ಷ ರೂ ಠೇವಣಿ ಇಡುವಂತೆ ನ್ಯಾಯಾಧೀಶರು ನಿರ್ದೇಶಿಸಿದರು. ಪರಿಶೀಲನೆ ನಂತರ ಹಣವನ್ನು ಅವರ ಖಾತೆಗೆ ಹಿಂತಿರುಗಿಸುವುದಾಗಿ ಭರವಸೆ ನೀಡಿದರು.
ಶಾಸಕರು ಆಗಸ್ಟ್ 18 ರಂದು ಆರ್‌ಟಿಜಿಎಸ್ ಮೂಲಕ ಮತ್ತೊಂದು ಖಾತೆಗೆ 20 ಲಕ್ಷ ರೂ ವರ್ಗಾಯಿಸಿದರು. ಕೆಲವು ದಿನಗಳ ನಂತರ, ಇದು ವಂಚನೆ ಎಂದು ಅರಿತುಕೊಂಡ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ತಿಳಿಸಿದರು.
ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಿಎನ್ಎಸ್ 318 ಮತ್ತು 319 ರ ಅಡಿಯಲ್ಲಿ ವಂಚನೆ ಮತ್ತು ವೇಷಧಾರಿ ಪ್ರಕರಣವನ್ನು ದಾಖಲಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಇಂತಹ ವಂಚನೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
Digital ಅರೆಸ್ಟ್ ನಲ್ಲಿ ಹಣ ಕಳೆದುಕೊಂಡ ಮಾಜಿ ಶಾಸಕ.
Previous Articleಮಲ್ಲಿಗೆ ಮುಡಿದರೆ ಒಂದು ಲಕ್ಷ ದಂಡ.
Next Article ವಿಷ ಕೊಡಿ ಎಂದ ಚಾಲೆಂಜಿಂಗ್ ಸ್ಟಾರ್.