ಕಳೆದ ಆರು ತಿಂಗಳುಗಳ ಕಾಲ ಅಳೆದು ತೂಗಿ ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ (Vijayendra) ಅವರನ್ನು ಆಯ್ಕೆ ಮಾಡಲಾಗಿದೆ. ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಲು ಟಿಕೆಟ್ ಗಾಗಿ ಸಾಕಷ್ಟು ಬೆವರು ಹರಿಸಿ, ಕಂಡವರಿಗೆಲ್ಲಾ ಜೀ ಎಂದು ತಮ್ಮ ತಂದೆ ಸ್ಪರ್ಧಿಸುತ್ತಿದ್ದ ಟಿಕೆಟ್ ಪಡೆದು ತಂದೆಯ ನಾಮ ಬಲದಿಂದವಮೊದಲ ಬಾರಿ ವಿಧಾನಸಭೆ ಪ್ರವೇಶಿಸಿರುವ ವಿಜಯೇಂದ್ರ ಇದೀಗ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ. ಪಕ್ಷ ಈಗ ರಾಜ್ಯದಲ್ಲಿ ಇರುವ ಸ್ಥಿತಿಯನ್ನು ಗಮನಿಸಿದಾಗ ಇವರ ಆಯ್ಕೆ ಹೈಕಮಾಂಡ್ ಗೆ ಅನಿವಾರ್ಯವಾಗಿತ್ತು.
ಅವರ ಆಯ್ಕೆಯ ಪತ್ರದಲ್ಲಿ ವಿಜಯೇಂದ್ರ ಯಡಿಯೂರಪ್ಪ ಎಂದು ಉಲ್ಲೇಖಿಸಲಾಗಿದೆ. ಇದರರ್ಥ ಬಿಜೆಪಿಗೆ ಯಡಿಯೂರಪ್ಪ ಅತ್ಯಂತ ಅನಿವಾರ್ಯ ಹಾಗೂ ಅಗತ್ಯ ಎಂದು ಸಾಬೀತಾಗಿದೆ.
ಯಡಿಯೂರಪ್ಪ ಅವರ ನೆರಳಿನಲ್ಲೇ ಸಾಗಿ ಬರುತ್ತಿರುವ ವಿಜಯೇಂದ್ರ ಅತ್ಯುತ್ತಮ ಸಂಘಟನಾ ಚತುರ, ಬದಲಾದ ಕಾಲಮಾನಕ್ಕೆ ತಕ್ಕಂತೆ ಚುನಾವಣೆ ಎದುರಿಸಬಲ್ಲ ಛಾತಿ, ಸವಾಲುಗಳನ್ನು ಎದುರಿಸುವ ಧೈರ್ಯ, ಯುವಕರ ಕಣ್ಮಣಿ ಹಾಗೂ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸಲು ಅಗತ್ಯವಿರುವ ತನು ಮನ ಧನ ಅರ್ಪಿಸುವ ಸಾಮರ್ಥ್ಯ ಹೊಂದಿರುವ ನಾಯಕ.
ವಿಜಯೇಂದ್ರ (Vijayendra) ತಮ್ಮ ತಂದೆಯ ನೆರಳಿನಲ್ಲೇ ಬೆಳೆಯುತ್ತಾ ಬಂದರೂ ತಮ್ಮದೆ ಆದ ಹಲವು ಕಾರಣದಿಂದಾಗಿ ತಂದೆಯ ಕೋಪಕ್ಕೆ ಗುರಿಯಾಗುತ್ತಿದ್ದ ಹುಡುಗ. ಯಾವಾಗ ಯಡಿಯೂರಪ್ಪ ಪ್ರತಿಪಕ್ಷದ ಸಾಲಿನಿಂದ ಆಡಳಿತ ಪಕ್ಷದ ಸಾಲಿಗೆ ಪದೋನ್ನತಿ ಪಡೆದರೋ ಆಗ ಹುಡುಗ ವಿಜಯೇಂದ್ರನ ವರಸೆ ಕೂಡಾ ಬದಲಾಯಿತು.ತನ್ನ ಸಹೋದರಿಯೊಂದಿಗೆ ಸೇರಿ ಯಡಿಯೂರಪ್ಪ ಅವರ ಗರಡಿಯ ಪ್ರಮುಖ ಹುರಿಯಾಳಾದರು.
ಇನ್ನು ಯಡಿಯೂರಪ್ಪ ಅವರ ಹಿರಿಯ ಪುತ್ರ ಬಿವೈ ರಾಘವೇಂದ್ರ ಒಮ್ಮೆ ಶಾಸಕರಾಗಿ ಎರಡು ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಇವರಿಗೂ ಯಡಿಯೂರಪ್ಪ ಅವರ ನಾಮಬಲವೇ ಶ್ರೀ ರಕ್ಷೆಯಾಗಿದ್ದರೂ ಅವರು ಶಿವಮೊಗ್ಗ ಜಿಲ್ಲೆಯಿಂದಾಚೆಗೆ ಯಾವುದೇ ಪ್ರಭಾವ ಹೊಂದಿಲ್ಲ. ಆದರೂ ಕೆಲವೊಮ್ಮೆ ಯಡಿಯೂರಪ್ಪ ವಿರೋಧಿ ಪಾಳಯದಲ್ಲಿ ಗುರುತಿಸಲ್ಪಡುವ ಈಶ್ವರಪ್ಪ,ಭಾನು ಪ್ರಕಾಶ್ ಪಾಳಯದಲ್ಲಿ ಗುರುತಿಸಿಕೊಳ್ಳಬೇಕು. ಆದರೆ ವಿಜಯೇಂದ್ರ ಹಾಗಲ್ಲ, ಯಾವುದೇ ಸ್ಥಾನಮಾನ ಹೊಂದಿಲ್ಲದಿದ್ದರೂ ಅತ್ಯಂತ ಪ್ರಭಾವಿ ನಾಯಕ.ಜೊತೆಗೆ ಯಡಿಯೂರಪ್ಪ ಅವರಲ್ಲದೆ ಬೇರೆ ಯಾವುದೇ ಬಣದಲ್ಲೂ ಗುರುತಿಸಿಕೊಳ್ಳದ ಧೃಡತೆಯುಳ್ಳ ನಾಯಕ.
ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಇವರೇ ಸರ್ಕಾರವನ್ನು ಮುನ್ನಡೆಸುತ್ತಿದ್ದರು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಹಾಗೇಯೇ ಹಲವು ವಿವಾದಗಳು ಇವರನ್ನು ಸುತ್ತಿಕೊಂಡವು. ಸ್ವಂತ ಹೋರಾಟದ ಶಕ್ತಿಯಿಂದ ಮೊದಲ ಬಾರಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ಮಾಜಿಯಾಗಿದ್ದು,ವಿಜಯೇಂದ್ರ ಕಾರಣಕ್ಕೆ. ಆಡಳಿತದಲ್ಲಿ ಇವರ ಹಸ್ತಕ್ಷೇಪ ಭ್ರಷ್ಟಾಚಾರದ ಸುಳಿಗೆ ಸಿಲುಕಿತು.
ಎರಡನೇ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೇರಿದ್ದು,ವಿಜಯೇಂದ್ರ ಮಾಡಿದ ಆಪರೇಷನ್ ಕಮಲ ಕಾರ್ಯಾಚರಣೆ ಮೂಲಕ. ಅಂದಹಾಗೆ ಈ ಬಾರಿ ಕೂಡ ಯಡಿಯೂರಪ್ಪ ಪದತ್ಯಾಗ ಮಾಡಿದ್ದು, ಇದೇ ವಿಜಯೇಂದ್ರ ಮತ್ತವರ ಆಪ್ತ ಬಣದ ಕಾರಣಕ್ಕೆ.
ಹೀಗಾಗಿ ಕಮಲ ಪಾಳಯದ ಚಿಂತಕರ ಚಾವಡಿ ಸಾಧ್ಯವಾದಷ್ಟು ಮಟ್ಟಿಗೆ ವಿಜಯೇಂದ್ತ ಅವರನ್ನು ಪಕ್ಷದ ವಿದ್ಯಮಾನಗಳ ಮುಖ್ಯವಾಹಿನಿಯಲ್ಲಿ ಪ್ರವೇಶಿಸಲು ಬಿಡದಂತೆ ನೋಡಿಕೊಂಡವು.ಬಡ ಪೆಟ್ಟಿಗೆ ಮಣಿಯದ ಯಡಿಯೂರಪ್ಪ ತಮ್ಮ ಪುತ್ರನ ಪರವಾಗಿ ಹಲವಾರು ಬಾರಿ ಹೈಕಮಾಂಡ್ ಕದ ತಟ್ಟಿದರೂ ನಿರಾಶೆಯೇ ಕಟ್ಟಿಟ್ಟ ಬುತ್ತಿಯಾಗಿತ್ತು.
ಅಂತಿಮವಾಗಿ ಒಲ್ಲದ ಮನಸ್ಸಿನಿಂದ ಶಿಕಾರಿಪುರ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡಲಾಯಿತು. ಅಲ್ಲಿಂದ ವಿಧಾನಸಭೆಗೆ ವಿಜಯೇಂದ್ರ ಆಯ್ಕೆಯಾದರೆ,ಯಡಿಯೂರಪ್ಪ ಅವರ ಕಡೆಗಣನೆ ಬಿಜೆಪಿಗೆ ದೊಡ್ಡ ಹೊಡೆತ ನೀಡಿತು.ಇದಾದ ಬಳಿಕ ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಯಡಿಯೂರಪ್ಪ ಅವರ ಅಗತ್ಯತೆಯನ್ನು ಸಾರಿ ಹೇಳಿದವು.
ಇನ್ನೂ ಸದಾ ಅಪ್ಪನ ನೆರಳಿನಂತೆ ಇದ್ದ ವಿಜಯೇಂದ್ರ ಅಪ್ಪನ ಎಲ್ಲ ಪಟ್ಟುಗಳನ್ನು ಕಲಿತಿದ್ದಾರೆ. ಹಲವು ಉಪ ಚುನಾವಣೆಗಳನ್ನು ಎದುರಿಸಿ ಅದನ್ನು ಸಾಧಿಸಿಯೂ ತೋರಿಸಿದ್ದಾರೆ. ಪಕ್ಷದ ಅಸ್ತಿತ್ವವೇ ಇಲ್ಲದ ಶಿರಾ ಮತ್ತು ಕೆ.ಆರ್.ಪೇಟೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಅವಕಾಶ ಸಿಕ್ಕರೆ ಸಮರ್ಥ ನಾಯಕನಾಗಬಲ್ಲೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಈ ಎಲ್ಲವೂ ಈಗ ವಿಜಯೇಂದ್ರ ಪರವಾಗಿ ಬಂದವು. ಪರಿಣಾಮ ಟೀಕೆ, ವಿರೋಧಗಳನ್ನು ಲೆಕ್ಕಿಸದೆ ಹೈಕಮಾಂಡ್ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.
ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಹೈಕಮಾಂಡ್ ತೆಗೆದುಕೊಂಡಿರುವ ಈ ನಿರ್ಧಾರ ಪಕ್ಷದ ಮಟ್ಟಿಗೆ ಅತ್ಯಂತ ಮಹತ್ವದ ನಿರ್ಧಾರವಾಗಿದೆ. ಅದೇ ರೀತಿ ನೂತನ ಅಧ್ಯಕ್ಷ ವಿಜಯೇಂದ್ರ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ ಹಾಗೆ ಅವರಿಗೆ ಅಷ್ಟೇ ದೊಡ್ಡದಾದ ಸವಾಲುಗಳು ಇವೆ.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವಾರು ಘಟಾನುಘಟಿ ನಾಯಕರು ಆಕಾಂಕ್ಷಿಗಳಾಗಿದ್ದರು ಆದರೆ ಕೇಂದ್ರ ನಾಯಕತ್ವ ಈ ವಿಷಯದಲ್ಲಿ ವಿಭಿನ್ನವಾದ ತೀರ್ಮಾನ ತೆಗೆದುಕೊಂಡಿದೆ. ಈಗಾಗಲೇ ಪಕ್ಷದಲ್ಲಿ ಹಲವಾರು ಹುದ್ದೆಗಳನ್ನು ಅನುಭವಿಸಿರುವ ನಾಯಕರಿಗೆ ಉನ್ನತ ಹುದ್ದೆ ನೀಡಬಾರದು ಎನ್ನುವುದು ಒಂದು ವಾದವಾದರೆ ಭವಿಷ್ಯದ ರಾಜಕಾರಣವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯುವ ನಾಯಕತ್ವಕ್ಕೆ ಆದ್ಯತೆ ನೀಡಿರುವುದು ಗಮನವಿಸಬೇಕಾದ ಸಂಗತಿಯಾಗಿದೆ ವಿಜಯೇಂದ್ರ ರಾಜ್ಯ ಬಿಜೆಪಿಗೆ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ ಅದೇ ರೀತಿಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ಯುವ ಪಡೆಯ ಜೊತೆ ಬಲವಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರು ಪ್ರತಿನಿಧಿಸುವ ಸಮುದಾಯದ ಯುವ ವರ್ಗ ವಿಜಯೇಂದ್ರವಪರವಾಗಿ ನಿಂತಿದೆ. ಈ ಎಲ್ಲವೂ ಈಗಲ್ಲದೆ ಹೋದರೆ ಮುಂದೆ ಪಕ್ಷದ ಭವಿಷ್ಯಕ್ಕೆ ಅನುಕೂಲಕರ ಎನ್ನುವುದು ಹೈಕಮಾಂಡ್ ನಿಲುವು.
ಇದೇ ಮಾನದಂಡವನ್ನು ಪ್ರತಿಪಕ್ಷ ನಾಯಕನ ಆಯ್ಕೆಗೂ ಅನುಸರಿಸುವ ಸಾಧ್ಯತೆ ನಿಶ್ಚಲವಾಗಿದೆ. ಹೀಗಾಗಿ ಯುವ ನಾಯಕ ಸುನಿಲ್ ಕುಮಾರ್ ಬಹುತೇಕ ವಿಧಾನಸಭೆಯ ಪ್ರತಿಕ್ಷ ನಾಯಕರಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ಹೈಕಮಾಂಡ್ ನ ಈ ನಿಲುವು ಪಕ್ಷದ ವಲಯಗಳಲ್ಲಿ ದೊಡ್ಡ ಬಿರುಗಾಳಿ ಏಳುವಂತೆ ಮಾಡುವುದು ನಿಶ್ಚಿತ. ಇಂತಹ ಬಿರುಗಾಳಿ ಎಬ್ಬಿಸುವ ಮೊದಲ ಸಾಲಿನಲ್ಲಿ ಹಿರಿಯ ನಾಯಕ ವಿ.ಸೋಮಣ್ಣ, ಮೈಸೂರಿನ ರಾಮದಾಸ್, ದಾವಣಗೆರೆಯ ರೇಣುಕಾಚಾರ್ಯ ನಿಲ್ಲುವುದು ನಿಶ್ಚಿತ.
ಇನ್ನೂ ಪಕ್ಷದೊಳಗೆ ನಿಂತು ವಿಜಯೇಂದ್ರ (Vijayendra) ಅವರಿಗೆ ಸಿ.ಟಿ.ರವಿ,ಬಸನಗೌಡ ಪಾಟೀಲ್ ಯತ್ನಾಳ್, ಮೊದಲಾದ ನಾಯಕರು ಮಗ್ಗುಲ ಮುಳ್ಳಾಗಿ ಕಾಡುವುದಂತೂ ಶತಃಸಿದ್ಧ.ಇದನ್ನು ವ್ಯವಸ್ಥಿತವಾಗಿ ಎದುರಿಸಬೇಕಾದ ತಂತ್ರಗಾರಿಕೆಯನ್ನು ವಿಜಯೇಂದ್ರ ರೂಡಿಸಿಕೊಳ್ಳಬೇಕಿದೆ.
ಇದು ಒಂದು ಕಡೆಯಾದರೆ, ಕಾಂಗ್ರೆಸ್ ಪಕ್ಷದಲ್ಲಿ ವಿಜಯೇಂದ್ರ ಅವರ ವಯಸ್ಸಿನಷ್ಟು ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ. ಸಂಘಟನಾ ಚತುರ ಟ್ರಬಲ್ ಶೂಟರ್ ಎಂದೇ ಹೆಸರಾದ ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿ ಮತ್ತು ಪ್ರದೇಶ ಅಧ್ಯಕ್ಷ.ಇವರ ಜೊತೆಗೆ ದಲಿತ ಸಮುದಾಯದ ಬಲಾಡ್ಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ. ಈ ಪಡೆಯಲ್ಲಿನ ಸಿಪಾಯಿಗಳಾದ ಸತೀಶ್ ಜಾರಕಿಹೊಳಿ,ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್ ಕೃಷ್ಣ ಬೈರೇಗೌಡ ಮೊದಲಾದ ಸಿಪಾಯಿಗಳು ಬಂಡೆಯನ್ನು ಗುದ್ದಿ ನೀರು ತರಿಸಬಲ್ಲ ಸಂಘಟನಾ ಸಾಮರ್ಥ್ಯದ ಇವರನ್ನು ಎದುರಿಸಿ ಪಕ್ಷವನ್ನು ಸಂಘಟಿಸಬೇಕಾದ ಜವಾಬ್ದಾರಿ ಇವರ ಹೆಗಲಿಗೇರಿದೆ.
ಹಾಗೆಂದ ಮಾತ್ರಕ್ಕೆ ಇವರಿಗೆ ಸಾಕಷ್ಟು ಸಮಯವಿದೆ ಎಂದೇನಿಲ್ಲಾ.ತಕ್ಷಣವೇ ಲೋಕಸಭಾ ಚುನಾವಣೆ ಅದರ ಬೆನ್ನಿಗೆ ವಿಧಾನ ಪರಿಷತ್ ಚುನಾವಣೆ ಅದು ಮುಗಿಯಿತು ಎನ್ನುವಾಗಲೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆ ಎದುರಾಗಲಿದೆ.ಹೀಗಾಗಿ ವಿಜಯೇಂದ್ರ ಮುಂದೆ ಹೆಜ್ಜೆ ಹೆಜ್ಜೆಗೂ ಸವಾಲು
ಇದನ್ನು ಅವರು ಯಾವ ರೀತಿ ನಿಭಾಯಿಸಬಲ್ಲರು ಎಂಬುದನ್ನು ಕಾಲವೇ ನಿರ್ಧರಿಸಲಿದೆ.