ಹಾವೇರಿ/Haveri – ಕ್ರೀಡಾಂಗಣಗಳಿರುವುದು ಆಟವಾಡಲು. ಮಕ್ಕಳ ದೈಹಿಕ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂದು ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಕ್ರೀಡಾಂಗಣಗಳಲ್ಲಿ ಶಾಲಾ-ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ ಸೇರಿದಂತೆ ಹಲವಾರು ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತಿದೆ ಇಂಥ ಕ್ರೀಡಾಂಗಣಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹೊರತುಪಡಿಸಿದರೆ ಯಾವಾಗಲಾದರೊಮ್ಮೆ ಸಾರ್ವಜನಿಕರ ಅಗತ್ಯದ ಕಾರ್ಯಕ್ರಮಗಳಿಗೆ ಸಮಯದೊಳಗೆ ಎಂಬ ಮಿತಿ ವಿಧಿಸಿ ಬಾಡಿಗೆ ನೀಡಲಾಗುತ್ತದೆ.
ಕೆಲವೊಮ್ಮೆ ರಾಜಕೀಯ ಪಕ್ಷಗಳ ಸಮಾವೇಶಕ್ಕೂ ಕೂಡ ಇಂತಹ ಮಿತಿಯನ್ನು ವಿಧಿಸಿ ಕ್ರೀಡಾಂಗಣಗಳನ್ನು ಬಾಡಿಗೆಗೆ ನೀಡಲಾಗುತ್ತದೆ ಇಂತಹ ಸಮಯದಲ್ಲಿ ಹಲವಾರು ಕಠಿಣ ನಿಯಮಗಳನ್ನು ಹಾಕಲಾಗುತ್ತದೆ ಅದನ್ನು ಪಾಲಿಸುವುದು ಬಾಡಿಗೆ ಪಡೆಯುವ ಸಂಸ್ಥೆಗಳಿಗೆ ಕಡ್ಡಾಯಗೊಳಿಸಲಾಗುತ್ತದೆ.
ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಖಾಸಗಿ ಸಭೆ ಸಮಾರಂಭಗಳಿಗೆ, ಜಿಲ್ಲಾ ಕ್ರೀಡಾಂಗಣಗಳನ್ನು ನೀಡಲು ಸಾಧ್ಯವಿಲ್ಲ ಆದರೆ ಹಾವೇರಿಯ ಜಿಲ್ಲಾ ಕ್ರೀಡಾಂಗಣವನ್ನು ಇದೀಗ ವಿಧಾನಸಭೆಯ ಉಪ ಸಭಾಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿ ಅವರ ಕುಟುಂಬದ ಮದುವೆಗಾಗಿ ನೀಡಲಾಗಿದೆ.
ಹಾವೇರಿ ಜಿಲ್ಲಾ ಕ್ರೀಡಾಂಗಣವನ್ನು ದಿನಕ್ಕೆ 20,000 ಬಾಡಿಗೆಗೆ ಒಟ್ಟು ಒಂಬತ್ತು ದಿನಗಳ ಕಾಲ ರುದ್ರಪ್ಪ ಲಮಾಣಿ ಅವರ ಕುಟುಂಬಕ್ಕೆ ನೀಡಲಾಗಿದೆ ರುದ್ರಪ್ಪ ಲಮಾಣಿ ಅವರು ಅದ್ದೂರಿಯಾಗಿ ಈ ಕ್ರೀಡಾಂಗಣದಲ್ಲಿ ತಮ್ಮ ಮಗಳ ಮದುವೆ ಮಾಡಲು ನಿರ್ಧರಿಸಿದ್ದು ಅತಿ ಗಣ್ಯರ ಆಗಮನಕ್ಕೆ ಅನುಕೂಲವಾಗಬೇಕು ಹಾಗೂ ಕ್ಷೇತ್ರದ ಜನರೆಲ್ಲ ಸೇರಲು ವಿಶಾಲವಾದ ಜಾಗ ಬೇಕು ಎಂದು ಜಿಲ್ಲಾ ಕ್ರೀಡಾಂಗಣವನ್ನು ಬಾಡಿಗೆಗೆ ಪಡೆದಿದ್ದಾರೆ.
ಈ ಅವಧಿಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಯಾವುದೇ ಕ್ರೀಡಾ ಚಟುವಟಿಕೆಗಳು ನಿಗದಿಯಾಗಿಲ್ಲ ಹೀಗಾಗಿ ಅದನ್ನು ಖಾಸಗಿ ಮದುವೆಗೆ ಬಳಸಲು ಬಾಡಿಗೆ ನೀಡಲಾಗಿದೆ ಈ ಬಾಡಿಗೆ ಮೊತ್ತದಿಂದ ಜಿಲ್ಲಾಡಳಿತಕ್ಕೆ ಆದಾಯ ಬರಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಸಾರ್ವಜನಿಕ ಬಳಕೆಯ ಈ ಕ್ರೀಡಾಂಗಣವನ್ನು ಈ ರೀತಿ ಖಾಸಗಿ ಮದುವೆಗೆ 9 ದಿನಗಳ ಸುದೀರ್ಘ ಅವಧಿಗೆ ಬಾಡಿಗೆ ನೀಡಿರುವ ಜಿಲ್ಲಾಧಿಕಾರಿಗಳ ಕ್ರಮದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.