ಬೆಂಗಳೂರು, ಮೇ 21- ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ದಿನ ಕಳೆಯುವುದರೊಳಗೆ ಇಬ್ಬರು ನಾಯಕರ ನಡುವೆ ಅಸಮಾಧಾನದ ಹೊಗೆ ಏಳತೊಡಗಿದೆ.
ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಮತದಾರರಿಗೆ ನೀಡಿದ ಗ್ಯಾರಂಟಿಗಳ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡ ಬಳಿಕ ಮಾಧ್ಯಮಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಜಾಹಿರಾತು ನೀಡಲಾಗಿದೆ.
ಈ ಜಾಹಿರಾತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಮಾತ್ರ ಹಾಕಲಾಗಿದ್ದು ಇದು ಉಪಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಅವರಿಗೆ ಬೇಸರ ತರಿಸಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ ನಡೆದಿರುವ ಈ ಪ್ರಚೋದನಾತ್ಮಕ ನಡೆಯಿಂದ ಸಹಜವಾಗಿ ಶಿವಕುಮಾರ್ ಬೇಸರಗೊಂಡಿದ್ದಾರೆ ಎನ್ನಲಾಗಿದ್ದು ಹಲವರು ಈ ಬಗ್ಗೆ ಅವರ ಬಳಿ ತಮ್ಮ ಅಸಮಾಧಾನ ಹೇಳಿಕೊಳ್ಳಲು ಬಂದಾಗ ಸಿಟ್ಟು ಹೊರಹಾಕಿದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಪತ್ರಿಕೆಗಳಲ್ಲಿ ಬಂದ ಜಾಹೀರಾತು ನೋಡಿದ ಉಪಮುಖ್ಯಮಂತ್ರಿ ಶಿವಕುಮಾರ್ ಅವರ ಆಪ್ತರು ತಮ್ಮ ನಾಯಕನಿಗೆ ವಿಷಯದ ಮಾಹಿತಿ ನೀಡಿದ್ದಾರೆ ಆ ವೇಳೆ ತಮಗೆಲ್ಲ ಗೊತ್ತಿದೆ ಇನ್ನು ಮುಂದೆ ಇಂಥವುದನ್ನು ಹೇಳಬೇಡಿ ಎಂದು ಅವರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ..
ಚಾಡಿ ಹೇಳಬೇಡಿ-
ಈ ಎಲ್ಲಾ ಘಟನಾವಳಿಗಳ ನಂತರ,ಕೆಪಿಸಿಸಿ ಕಚೇರಿಯ ಇಂದಿರಾ ಭವನದಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಮುಖ್ಯಮಂತ್ರಿ ಸೇರಿದಂತೆ ಯಾರ ವಿರುದ್ಧವೂ ದೂರಿನೊಂದಿಗೆ ನನ್ನ ಬಳಿ ಚಾಡಿ ಹೇಳಲು ಬರಬೇಡಿ. ನಾನು ಯಾರ ಮಾತನ್ನೂ ಕೇಳುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನನಗೂ 30 ವರ್ಷಗಳ ರಾಜಕೀಯ ಅನುಭವ ಇದೆ. ನನ್ನದೇ ಆದ ವಿಚಾರಗಳಲ್ಲಿ ನಾನು ತೀರ್ಮಾನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಹಾಗೆ ಹೇಳಿದರು, ಎಂ.ಬಿ.ಪಾಟೀಲ್ ಹೀಗೆ ಹೇಳಿದರು ಎಂದೆಲ್ಲ ಚಾಡಿ ಹೇಳಲು ಬರಬೇಡಿ. ನಾನು ಯಾರ ಮಾತನ್ನೂ ಕೇಳುವುದಿಲ್ಲ. ಪ್ರಮುಖವಾಗಿ ಅಧಿಕಾರಕ್ಕಾಗಿ ಯಾರೇ ಆದರೂ ನಾಯಕರನ್ನು ಭೇಟಿ ಮಾಡಿ ಲಾಬಿ ನಡೆಸುವುದು ಸರಿಯಲ್ಲ. ಯಾರಿಗೆ ಅವಕಾಶ ಕೊಡಬೇಕು, ಯಾವ ಅವಕಾಶ ನೀಡಬೇಕು ಎಂಬುದು ನಮಗೆ ಗೊತ್ತಿದೆ. ಕಾರ್ಯಕರ್ತರು, ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಆದರೆ ಅದನ್ನು ಮುಖಂಡರ ಮುಂದೆ ತೋರಿಸುವುದಲ್ಲ. ಸ್ಥಳೀಯವಾಗಿ ಪಕ್ಷ ಸಂಘಟಿಸಬೇಕು ಎಂದು ಹೇಳಿದರು.
ನಮಗೆ ಲೋಕಸಭೆ ಚುನಾವಣೆ ಬಹಳ ಮುಖ್ಯವಾಗಿದೆ. ಅದಕ್ಕಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು. ನೀವು ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಹೆಚ್ಚು ಸದೃಢಗೊಳಿಸಬೇಕು. ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿದ್ದೇವೆ. ಆದರೆ, ಸಂಸತ್ ಚುನಾವಣೆ ಭಿನ್ನವಾಗಿರುತ್ತದೆ. ಈ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
Previous Articleಜಮೀರ್ ಅಹಮದ್ ಖಾನ್ ಕನ್ನಡ ವಿರೋಧಿನಾ?
Next Article ಮೋದಿ ಸಮಸ್ಯೆ ಒಡ್ಡುತ್ತಿದ್ದಾರೆ ಎಂದ ಬೈಡೆನ್