ಬೆಂಗಳೂರು,ಅ.23 – ನಿಗಮ ಮಂಡಳಿಗಳಲ್ಲಿ ಅಧಿಕಾರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಕಾಂಗ್ರೆಸ್ (Congress) ಮುಖಂಡರು ಮತ್ತು ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಹಿ ಸುದ್ದಿ ನೀಡಿದ್ದಾರೆ.
ಅಕ್ಟೋಬರ್ 25 ರ ನಂತರ ಮುಖ್ಯಮಂತ್ರಿ ಹಾಗೂ ಪಕ್ಷದ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ ನಿಗಮ ಮಂಡಳಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು ಆಯುಧ ಪೂಜೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎನ್ನುವ ಹಂಬಲ ತೀವ್ರವಾಗಿ ನಮಗೂ ಇದೆ. ನಾನೂ ಒಬ್ಬ ಕಾರ್ಯಕರ್ತನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಹೇಳಿದರು.
ದಸರಾ ಮುಗಿಯುತ್ತಿದ್ದಂತೆ ಈ ಸಂಬಂಧ ಸಭೆ ನಡೆಯಲಿದೆ ಇದರಲ್ಲಿ ಪಕ್ಷಕ್ಕೆ ನೂತನ ಕಾರ್ಯಾಧ್ಯಕ್ಷರ ನೇಮಕಾತಿ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಈ ಸಂಬಂಧ ಈ ತಿಂಗಳ 20 ನೇ ತಾರೀಕಿನಂದು ಸಿಎಂ ಜೊತೆ ಮೊದಲ ಸುತ್ತಿನ ಮಾತುಕತೆ ನಡೆಸಬೇಕು ಎಂದು ಸಮಯ ನಿಗಧಿಯಾಗಿತ್ತು. ಆದರೆ ಆ ದಿನ ಬೇರೆ ಕೆಲಸಗಳ ನಿಮಿತ್ತ ಚರ್ಚೆ ನಡೆಯಲಿಲ್ಲ.ಈಗ ಹಬ್ಬ ಮುಗಿದ ನಂತರ ನಾವಿಬ್ಬರು ಕುಳಿತು ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು
ದೆಹಲಿಯಿಂದ ಹೈಕಮಾಂಡಿನವರು ಬರುತ್ತಾರೆ. ನಮ್ಮ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು ರಾಜಸ್ಥಾನ ಸೇರಿದಂತೆ ಇತರೇ ರಾಜ್ಯಗಳ ಟಿಕೆಟ್ ಹಂಚಿಕೆಯಲ್ಲಿ ಇದ್ದಾರೆ. ನಾಳೆ ಟಿಕೆಟ್ ಘೋಷಣೆ ಆಗುವ ಸಾಧ್ಯತೆಯಿದ್ದು, ಅಷ್ಟರಲ್ಲಿ ನಾವು ಸಭೆ ನಡೆಸಿ ಮಾತುಕತೆ ನಡೆಸಿರುತ್ತೇವೆ ಎಂದು ಹೇಳಿದರು ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಜನರ ಸೇವೆ ಮಾಡುವಂತಹ ಭಾಗ್ಯವನ್ನ ಕೊಟ್ಟು, ನಮ್ಮ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ. ಬಅಧಿಕಾರವನ್ನ ಬಹಳ ಜವಾಬ್ದಾರಿಯಿಂದ ನಿರ್ವಹಿಸಿ, ನುಡಿದಂತೆ ನಡೆದು, ಉತ್ತಮವಾದ ಆಡಳಿತ ನೀಡುತ್ತಿದ್ದೇವೆ. ರಾಜ್ಯದ ಮುಖ್ಯಮಂತ್ರಿಗಳ, ಶಾಸಕರ, ಸಂಪುಟ ಸಹೋದ್ಯೋಗಿಗಳ ಪರವಾಗಿ ನಾನು ವಿಜಯದಶಮಿಯ ದಿನ ರಾಜ್ಯದ ಜನರಿಗೆ ಉತ್ತಮ ಆಡಳಿತದ ಆಶ್ವಾಸನೆ ನೀಡುತ್ತೇನೆ ಎಂದರು.
ವಿದ್ಯುತ್ ಖರೀದಿ ಮಾಡಲು, ಈ ಬರಗಾಲದಲ್ಲಿ ವಿದ್ಯುತ್ ಅಭಾವವನ್ನ ಸೃಷ್ಟಿ ಮಾಡಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಯಾರು ಅಂತಹ ಜ್ಞಾನ ಭಂಡಾರದಿಂದ, ಅನುಭವದ ಮಾತುಗಳನ್ನು ಆಡಿಸಿದರೊ ಗೊತ್ತಿಲ್ಲ. ನಮಗೆ ಚಿಂತೆಯಿಲ್ಲ ನಮ್ಮ ಜನರನ್ನು ಕಾಪಾಡುತ್ತೇವೆ, ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಉತ್ಪಾದನೆ ನಿಲ್ಲಬಾರದು ಎಂದು ಸೂಚನೆ ನೀಡಿದ್ದು, ಮಾತು ಕೊಟ್ಟಂತೆ ವಿದ್ಯುತ್ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು
ಈ ಮೊದಲು ಕೃಷಿ ಪಂಪ್ ಸೆಟ್ಟುಗಳಿಗೆ 6 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು, 2013 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 7 ಗಂಟೆ ನೀಡಲು ತೀರ್ಮಾನ ಮಾಡಿತು. ಆದರೆ ನಂತರ ಸರ್ಕಾರಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಲಿಲ್ಲ. ನಾವು ಏನೇ ತೊಂದರೆಯಾದರೂ ರೈತರಿಗೆ 5 ಗಂಟೆಗಳ ಕಾಲ ವಿದ್ಯುತ್ ನೀಡಲೇಬೇಕು ಎಂದು ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.