ಬೆಂಗಳೂರು,ಅ.23 – ಕೇಂದ್ರ ಸಚಿವೆ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಲ್ಪಡುವ ನಾಯಕಿ ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲು ಪಕ್ಷದ ಹೈಕಮಾಂಡ್ ಒಲವು ತೋರಿದೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಅವರಿಗೆ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಕರೆ ಮಾಡಿ ಶುಭಾಶಯ ಕೋರಿರುವುದು ಇದಕ್ಕೆ ಮತ್ತಷ್ಟು ಇಂಬು ನೀಡಿದೆ.
ಶೋಭಾ ಕರಂದ್ಲಾಜೆ (Shobha Karandlaje) ನೇಮಕವಾದರೆ ಮೊದಲ ಬಾರಿಗೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಹಿಳೆಯೊಬ್ಬರು ಅಧಿಕಾರ ವಹಿಸಿಕೊಂಡಂತಾಗುತ್ತದೆ. 2 ದಿನಗಳೊಳಗಾಗಿ ನೇಮಕಾತಿ ಆಗಬಹುದು ಎಂದು ರಾಜ್ಯ ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಹಲವು ನಾಯಕರ ಕಣ್ಣು ಹಾಕಿದ್ದರು. ರಾಜ್ಯಾಧ್ಯಕ್ಷ ರೇಸ್ನಲ್ಲಿ ಸಿ.ಟಿ.ರವಿ, ಬಿ.ವೈ.ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್, ಅಶ್ವತ್ಥ್ ನಾರಾಯಣ, ವಿ.ಸೋಮಣ್ಣದಿಂದಲೂ ಸರ್ವಪ್ರಯತ್ನ ನಡೆದಿದೆ. ಈ ಈ ಹಿನ್ನಲೆಯಲ್ಲಿ ನಾಯಕರ ನಡುವೆ ಪಕ್ಷದ ಅಧ್ಯಕ್ಷಗಿರಿಗಾಗಿ ತೀವ್ರ ಪೈಪೋಟಿ ನಡೆದಿದ್ದು, ನಾಯಕರ ಮಧ್ಯೆ ಬಣ ನಿರ್ಮಾಣವಾಗಿದೆ. ಹೀಗಾಗಿ ಮಹಿಳಾ ಅಧ್ಯಕ್ಷೆ ಮೂಲಕ ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ಪ್ಲ್ಯಾನ್ ರೂಪಿಸಿದೆ. ಇನ್ನೂ ಬಹುಮುಖ್ಯವಾಗಿ ಶೋಭಾ ಕರಂದ್ಲಾಜೆ ಹೆಸರಿಗೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧಿಸಲ್ಲ ಎನ್ನುವುದು ವರಿಷ್ಠರ ತಂತ್ರವಾಗಿದೆ.
ಶೋಭಾ ನಿಯೋಜನೆ ಸಂಬಂಧದಲ್ಲಿ ಬಿಎಸ್‍ವೈ ಅವರನ್ನು ಸಂಪರ್ಕಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯ ಪಡೆದಿದ್ದಾರೆ ಎಂದು ಉನ್ನತ ಮೂಲಗಳು ಹೇಳುತ್ತವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದಾರೆ. ಇವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಒಕ್ಕಲಿಗ ಸಮುದಾಯದ ಮತಗಳು ಪ್ರಮುಖ ಪಾತ್ರ ವಹಿಸಿದ್ದವು.
ಅದೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವೆ ಶೋಭಾ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳು ಸಿಗಬಹುದು ಎನ್ನುವ ಲೆಕ್ಕಾಚಾರ ಹೈಕಮಾಂಡ್‍ದ್ದಾಗಿದೆ ಎಂದು ಹೇಳಲಾಗಿದೆ. ಜೆಡಿಎಸ್ ಕೂಡ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಒಕ್ಕಲಿಗರ ಮತಗಳನ್ನು ಸೆಳೆಯುವುದು ಸುಲಭವಾಗಲಿದೆ ಎಂದು ಹೇಳಲಾಗಿದೆ.