ಬೆಂಗಳೂರು,ಅ.24 – ಸೇನೆಗೆ ಸೇರಿ ಸೇವೆ ಸಲ್ಲಿಸಬೇಕು ಎನ್ನುವುದು ಕೆಲವರ ಆದರ್ಶವಾದರೆ,ಅನೇಕರು ನಿರುದ್ಯೋಗದ ಕಾರಣಕ್ಕಾಗಿ ಸೇನಾಪಡೆಗಳಿಗೆ ಸೇರ್ಪಡೆಯಾಗುತ್ತಿದ್ದಾರೆ.ಇಂತಹವರನ್ನೇ ಗುರಿಯಾಗಿಸಿಕೊಂಡ ವಂಚಕರ ಜಾಲ
ಭಾರತೀಯ ಸಶಸ್ತ್ರ ಪಡೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 150 ಮಂದಿ ಯುವಕರಿಗೆ ಪಂಗನಾಮ ಹಾಕಿದೆ.
ಇಂತಹ ಒಂದು ಜಾಲವನ್ನು ಪೊಲೀಸರು ಮತ್ತು ಮಿಲಿಟರಿ ಗುಪ್ತಚರ ಜಂಟಿಯಾಗಿ ಭೇದಿಸಿ ಒಂದು ಕೋಟಿ ರೂಪಾಯಿ ವಂಚಿಸಿರುವ ಅತಿದೊಡ್ಡ ಹಗರಣವನ್ನು ಬಯಲಿಗೆಳಿದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ಸೇನೆ ತೊರೆದು ಬಂದಿರುವ ಹುಬ್ಬಳ್ಳಿಯ ಶಿವರಾಜ್ ವಟಗಲ್ (40) ಮತ್ತು ಆತನ ಪತ್ನಿ ಭೀಮವ್ವ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಬಂಧಿತರಿಂದ ನಕಲಿ ಗುರುತಿನ ಚೀಟಿಗಳು ಮತ್ತು ಸೇನಾ ನೇಮಕಾತಿಗೆ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾ ಮಾಹಿತಿ ಬ್ಯೂರೋದ ರಕ್ಷಣಾ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ಟೋಬರ್ 20 ರಂದು ಚಿತ್ರದುರ್ಗದಲ್ಲಿ ವಂಚಕ ಮತ್ತು ಆತನ ಪತ್ನಿಯನ್ನು ಸೆರೆಹಿಡಿಯಲು ಮಿಲಿಟರಿ ಇಂಟೆಲಿಜೆನ್ಸ್, ಬೆಂಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ ಪೊಲೀಸರ ತಂಡವು ಜಂಟಿ ಕಾರ್ಯಾಚರಣೆ ನಡೆಸಿತು.
ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ 150 ಯುವಕರಿಗೆ 1 ಕೋಟಿ ರೂ. ವಂಚಿಸಿದ್ದಾರೆ’ ಎಂದು ಅದು ಹೇಳಿದೆ.
ದಾವಣಗೆರೆ ಜಿಲ್ಲೆಯ ಪ್ರಕಾಶ್ (31) ಎಂಬುವವರು ಶಿವರಾಜ್ ವಟಗಲ್ ವಿರುದ್ಧ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ.