ಬೆಂಗಳೂರು, ಸೆ.4- ಕಾವೇರಿ (Cauvery) ನದಿ ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು ಹೋರಾಟ ನಡೆಸುತ್ತಿರುವ ಬೆನ್ನಲ್ಲೇ, ಅನೇಕ ಸಂಘಟನೆಗಳು ಕಾವೇರಿ ನೀರಿಗಾಗಿ ಹೋರಾಟ ಮಾಡುತ್ತಿರುವುದು ಒಳ್ಳೆಯ ಕೆಲಸ. ಆದರೆ, ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದಾಗ ಈ ಸಂಘಟನೆಗಳು ಎಲ್ಲಿಗೆ ಹೋಗಿದ್ದವು ಎಂದು ಉಪ ಮುಖ್ಯಮಂತ್ರಿ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಇಷ್ಟೊಂದು ಮಟ್ಟದಲ್ಲಿ ಹೋರಾಟ ನಡೆಸುತ್ತಿರುವುವರುಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ಕೇಂದ್ರ ಸರ್ಕಾರವನ್ನು ಯಾಕೆ ಆಗ್ರಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಉಂಟಾಗಿರುವ ನೀರು ಹಂಚಿಕೆ ಬಿಕ್ಕಟ್ಟು ಹಾಗೂ ಸಮಸ್ಯೆಗೆ ಮೇಕೆದಾಟು ಯೋಜನೆ ಒಂದೇ ಪರಿಹಾರ. ಇದರಲ್ಲಿ ರಾಜಕಾರಣ ಮಾಡುವುದರಲ್ಲಿ ಪ್ರಯೋಜನ ಇಲ್ಲ’ ಎಂದರು.
ಕಾವೇರಿ (Cauvery) ನದಿ ನೀರಿನ ವಿಚಾರವಾಗಿ ಮಾತನಾಡುತ್ತಿರುವ ಈ ಸಂಘಟನೆಗಳಾಗಲಿ, ಬಿಜೆಪಿ, ಜೆಡಿಎಸ್ ನಾಯಕರುಗಳಾಗಲಿ ಮೇಕೆದಾಟು ಯೋಜನೆಗೆ ಅನುಮತಿ ನೀಡಿ ಎಂದು ಕೇಂದ್ರ ಸರ್ಕಾರವನ್ನು ಏಕೆ ಆಗ್ರಹಿಸುತ್ತಿಲ್ಲ? ಪರಿಸರ ಇಲಾಖೆಯಿಂದ ಅನುಮತಿ ಯಾಕೆ ಕೊಡಿಸುತ್ತಿಲ್ಲ? ಈಗ ಹೋರಾಟ ಮಾಡುತ್ತಿರುವವರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಲ್ಲವೇ ಎಂದು ಕೇಳಿದರು.
ನಮ್ಮ ರೈತರ ಹಿತ ಕಾಯಲು ನಾವು ಬದ್ಧರಾಗಿದ್ದೇವೆ. ಅದೇ ಕಾರಣಕ್ಕೆ ತಮಿಳುನಾಡಿನವರು ನಿತ್ಯ 24 ಸಾವಿರ ಕ್ಯುಸೆಕ್ ನೀರು ಕೇಳಿದ್ದರು. 3 ಸಾವಿರ ಕ್ಯುಸೆಕ್ ಮಾತ್ರ ಬಿಡಲು ಸಾಧ್ಯ ಎಂದು ನಮ್ಮ ಅಧಿಕಾರಿಗಳು ಸಮರ್ಥವಾಗಿ ವಾದ ಮಾಡಿದ್ದರ ಪರಿಣಾಮ ಈಗ ಪ್ರಾಧಿಕಾರ 5 ಸಾವಿರ ಕ್ಯುಸೆಕ್ ನೀರು ಬಿಡಲು ಅದೇಶಿಸಿದೆ ಎಂದರು.
‘ನ್ಯಾಯಾಲಯದಲ್ಲೂ ರಾಜ್ಯದ ಹಿತರಕ್ಷಣೆಗೆ ಹೋರಾಟ ಮಾಡಲು ನಾವು ಬದ್ಧರಾಗಿದ್ದೇವೆ. ಈ ವಿಚಾರವಾಗಿ ನಾನು ಕಾನೂನು ತಜ್ಞರ ತಂಡದ ಜತೆ ಚರ್ಚೆ ಮಾಡಿದ್ದೇನೆ. ನಮ್ಮ ಆಣೆಕಟ್ಟುಗಳ ವಾಸ್ತವ ಸ್ಥಿತಿ ಹೇಗಿದೆ ಎಂದು ಅವರಿಗೆ ಮನವರಿಕೆ ಮಾಡಲಿದ್ದೇವೆ’ ಎಂದು ಹೇಳಿದರು.