ಬೆಂಗಳೂರು,ಜ.28-
‘JDS ವಿಸರ್ಜನೆ ಮಾಡುವುದಾಗಿ ಆ ಪಕ್ಷದ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇದರಿಂದ ಆ ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ. ಅಂತಹವರಿಗೆ ನಾನಿದ್ದೇನೆ, Congress ಗೆ ಬನ್ನಿ ಎಂದು ಕರೆಯುತ್ತಿದ್ದೇನೆ’ ಎಂದು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಈ ಕರೆಯಿಂದಾಗಿ ಕನಕಪುರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಂದಲೂ JDS ಕಾರ್ಯಕರ್ತರು Congress ಸೇರ್ಪಡೆಯಾಗುತ್ತಿದ್ದಾರೆ ಎಂದರು.
‘JDS ವಿಷಯದಲ್ಲಿ ನನಗೆ ಯಾವ ಮೃದು ದೋರಣೆಯೂ ಇಲ್ಲ. ಹಾಗೆ ನೋಡಿದರೆ, ಈ ಅವಧಿಯಲ್ಲೇ JDS ನಿಂದ ಹೆಚ್ಚು ಕಾರ್ಯಕರ್ತರು Congress ಸೇರ್ಪಡೆಯಾಗುತ್ತಿದ್ದಾರೆ. ಒಂದು ರಾಜಕೀಯ ಪಕ್ಷಕ್ಕೆ ವಿಸರ್ಜನೆ ಎಂಬ ಪದ ಗೊತ್ತಿರುವುದಿಲ್ಲ. ಆದರೆ ಕುಮಾರಸ್ವಾಮಿ ಹೇಳಿ ಬಿಟ್ಟಿದ್ದಾರೆ. JDS ನ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ’ ಎಂದು ಹೇಳಿದರು. ‘JDS ಗೆಲ್ಲುವುದಿಲ್ಲ ಎಂದು ನಾನು ಹೇಳುವುದಿಲ್ಲ. ಅವರು ಒಂದು ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯವಾಗಿ ಅವರು ಇರಬೇಕು ಎಂಬುದು ನಮ್ಮ ನಿಲುವು. ಅದನ್ನು ಮೃದು ದೋರಣೆ ಎಂದರೆ ಹೇಗೆ, ದಿನಾ ಬೆಳಗ್ಗೆ ನಾನು ಅವರ ಜೊತೆ ಕುಸ್ತಿ ಮಾಡಬೇಕಾ?’ ಎಂದು ಪ್ರಶ್ನಿಸಿದರು.
‘PSI ಹಗರಣದಲ್ಲಿ ಸರ್ಕಾರದ ಬೆಂಬಲ ಇರುವುದು ಖಚಿತ. ಈ ಸರ್ಕಾರ ನೇಮಕಾತಿ, ವ್ಯಾಸಂಗ ಹಾಗೂ ಪರೀಕ್ಷೆಗಳಲ್ಲೂ ಭ್ರಷ್ಟಚಾರ ನಡೆಸುತ್ತಿದೆ’ ಎಂದು ಆರೋಪಿಸಿದರು. ‘PSI ಹಗರಣದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಾರೆ. ಸರ್ಕಾರದ ಬೆಂಬಲ ಇಲ್ಲದೆ ಅವರಿಗೆ ಜಾಮೀನು ಸಿಗಲು ಸಾಧ್ಯವಿರಲಿಲ್ಲ. ಸರ್ಕಾರದ ಎಲ್ಲಾ ಪ್ರಮುಖರು ಇದರಲ್ಲಿ ಹೊಣೆಯಾಗಿದ್ದಾರೆ’ ಎಂದು ಹೇಳಿದರು.