ಬೆಂಗಳೂರು, ಸೆ.,19 – ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಇದೀಗ ಮತ್ತೊಂದು ಕಂಟಕ ಎದುರಾಗಿದೆ. ಅಕ್ರಮ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ದೆಹಲಿ ಜಾರಿ ನಿರ್ದೇಶನಾಲಯದ (ಇಡಿ) ಕಚೇರಿಯಲ್ಲಿ ವಿಚಾರಣೆ ಎದುರಿಸುತ್ತಿರುವಾಗಲೆ ಅವರಿಗೆ ಆಘಾತಕಾರಿ ಸುದ್ದಿಯೊಂದು ತಲುಪಿದೆ.
ಹಣ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಇವರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದು ಮಾಡಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಕಳೆದ 2017ರಲ್ಲಿ ಬಿಡದಿಯ ಈಗಲ್ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆ ದಾಳಿಯ ಸಂದರ್ಭದಲ್ಲಿ ರೆಸಾರ್ಟ್‌ನಲ್ಲಿ ಗುಜರಾತಿನ 44 ಮಂದಿ ಕಾಂಗ್ರೆಸ್ ಶಾಸಕರ ಯೋಗಕ್ಷೇಮದ ಉಸ್ತುವಾರಿಯನ್ನು ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ನೋಡಿಕೊಳ್ಳುತ್ತಿದ್ದರು. ಈ ಮಾಹಿತಿ ತಿಳಿದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿ ಎಫ್ಐಆರ್ ದಾಖಲಿಸಿದ್ದರು.
ಇದನ್ನು ಶಿವಕುಮಾರ್ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಐಟಿ ದಾಖಲಿಸಿದ್ದ ಎಫ್ಐಆರ್ ರದ್ದತಿಗೆ ಕೋರ್ಟ್ ಆದೇಶಿಸಿತ್ತು. ಇದನ್ನು ಐಟಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು, ಅಲ್ಲಿಯೂ ಅದಕ್ಕೆ ಹಿನ್ನಡೆಯಾಗಿ, ಶಿವಕುಮಾರ್ ಪರ ತೀರ್ಪು ಬಂದಿತ್ತು. ‘ಆರೋಪಿಯಿಂದ ಬರೀ ಹಣಕಾಸು ವ್ಯವಹಾರಗಳು ನಡೆದಿದ್ದರೆ ಕೇಸ್ ದಾಖಲಿಸಲು ಸಾಧ್ಯವಿಲ್ಲ. ಲೆಕ್ಕವಿಲ್ಲದ ವಹಿವಾಟುಗಳು ನಡೆದಿದ್ದರೂ ತೆರಿಗೆ ಅಥವಾ ದಂಡದ ಪಾವತಿಗೆ ಆರೋಪಿ ಹೊಣೆಗಾರರಾಗಿದ್ದಾರೆ ಎಂಬುದನ್ನು ನಿರ್ಧರಿಸುವವರೆಗೆ ಯಾವುದೇ ಕಾನೂನು ಕ್ರಮವನ್ನು ಆರಂಭಿಸುವಂತಿಲ್ಲ’ ಎಂದು ಹೈಕೋರ್ಟ್ ಹೇಳಿತ್ತು.
ಹೈಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆಯು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಪರಿಶೀಲನೆ ವೇಳೆ ಕೆಲವು ಮಹತ್ವದ ದಾಖಲೆಗಳು ತಮಗೆ ಲಭ್ಯವಾಗಿವೆ, ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ್ದು ಎನ್ನಲಾದ ದಾಖಲೆಗಳನ್ನು ಅವರು ಹರಿದು ಹಾಕಿದ್ದಾರೆ. ಆ ದಾಖಲೆಗಳಲ್ಲಿ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ್ದ ಕೆಲವೊಂದು ಮಾಹಿತಿಗಳು ಇದ್ದವು. ಅಕ್ರಮ ವ್ಯವಹಾರ, ಡಿಜಿಟಲ್ ಕೇಬಲ್ ಜತೆಗಿನ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಇದರಲ್ಲಿ ಇದ್ದವು ಎಂದು ಐಟಿ ವಾದಿಸಿತ್ತು. ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ವಿಭಾಗೀಯ ಪೀಠವು, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಿಗೆ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
Previous Articleರಾಣಿ ಅಂತ್ಯಕ್ರಿಯೆಗೆ ಬೆಂಗಳೂರಿನ ಡಾ. ಮಥಾಯಿ
Next Article ಅನುರಾಗ್ ತಿವಾರಿ ಸಾವು ಪ್ರಕರಣ