ಬೆಂಗಳೂರು – ನಿಗಧಿತ ಆದಾಯ ಮೂಲ ಮೀರಿ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ಕೇಳಿಬಂದ ಆರೋಪದ ಕುರಿತು ಸಿಬಿಐ ತನಿಖೆ ಆದೇಶ ನಿರ್ಧಾರ ವಾಪಸ್ ಪಡೆಯುವ ರಾಜ್ಯ ಸರ್ಕಾರದ ಕ್ರಮ ಪ್ರತಿ ಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ.
ಅಕ್ರಮವೆಸಗಿರುವ ಶಿವಕುಮಾರ್ ಅವರಿಗೆ ಏಕೆ ಈಗ ಭಯ ಆರಂಭವಾಗಿದೆ? ಅವರು ಪ್ರಾಮಾಣಿಕರಿದ್ದರೆ ಈ ತೀರ್ಮಾನವನ್ನು ಅವರೇ ವಿರೋಧಿಸಬೇಕಿತ್ತು. ರಾಜ್ಯದ ಉಪ ಮುಖ್ಯಮಂತ್ರಿಯಾಗಿ ತನಿಖೆ ಎದುರಿಸುವುದಾಗಿ ಹೇಳಬೇಕಿತ್ತು. ಶಿವಕುಮಾರ್ ಅವರನ್ನು ರಕ್ಷಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಪ್ಪು ಮಾಡಿರುವುದಾಗಿ ಶಿವಕುಮಾರ್ ಒಪ್ಪಿಕೊಳ್ಳುವಂತಿದೆ ರಾಜ್ಯ ಸರ್ಕಾರದ ಈ ತೀರ್ಮಾನ ಇದರ ವಿರುದ್ಧ ಬೆಳಗಾವಿ ವಿಧಾನ ಮಂಡಲದ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.
ಹಿಂದಿನ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಶಿವಕುಮಾರ್ ಪ್ರಕರಣದಲ್ಲಿ ಏನು ವರದಿ ನೀಡಿದ್ದರು ಎಂಬುದು ನನಗೆ ಗೊತ್ತಿಲ್ಲ. ನಾನು ಆ ವರದಿಯನ್ನು ನೋಡಿಲ್ಲ. ಆದರೆ, ಇಂತಹ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸುವುದು ತಪ್ಪು. ಹಿಂದಿನ ಸರ್ಕಾರವು ರಾಜಕೀಯ ದ್ವೇಷದ ಕಾರಣಕ್ಕಾಗಿ ತನಿಖೆಗೆ ಅನುಮತಿ ಕೊಟ್ಟಿರಲಿಲ್ಲ. ಪ್ರಕರಣದಲ್ಲಿ ಮೇಲ್ನೋಟಕ್ಕೆ ಸಾಕ್ಷ್ಯಗಳಿದ್ದರಿಂದ ಅನುಮತಿ ನೀಡಲಾಗಿತ್ತು ಎಂದು ಹೇಳಿದರು.
ಅಕ್ರಮ ಆಸ್ತಿಗಳಿಕೆ ಆರೋಪ ಕುರಿತು ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ನಗದು ಪತ್ತೆಯಾದದ್ದನ್ನು ಆಧರಿಸಿ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯವೂ ತನಿಖೆ ನಡೆಸುತ್ತಿದೆ. ಶಿವಕುಮಾರ್ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಬಗ್ಗೆ ತನಿಖೆಯಲ್ಲಿ ಸಾಕ್ಷ್ಯಗಳು ಲಭಿಸಿವೆ ಎಂದು ಸಿಬಿಐ ಹೇಳಿದೆ. ಈ ಹಂತದಲ್ಲಿ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವ ತೀರ್ಮಾನ ಮಾಡಿರುವುದು ಕಾನೂನಿಗೆ ವಿರುದ್ಧʼ ಎಂದು ಟೀಕಿಸಿದರು.