ಬೆಂಗಳೂರು, ನ.24- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ವಿರುದ್ಧದ ಅಕ್ರಮ ಆಸ್ತಿ ಪ್ರಕರಣ ಸಿಬಿಐ ತನಿಖೆಗೆ ವಹಿಸಿದ ನಿರ್ಣಯ ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಬೆನ್ನಲ್ಲೇ ಸರ್ಕಾರ ತನ್ನ ನಿಲುವನ್ನು ಬಲವಾಗಿ ಸಮರ್ಥಿಸಿದೆ.
ಹಿಂದೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ವಿಷಯದಲ್ಲಿ ಮಾಡಿದ ಲೋಪವನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಇತಿ-ಮಿತಿಯಲ್ಲಿ ತೀರ್ಮಾನ ತೆಗೆದುಕೊಂಡಿದೆ. ನಾವು ಪ್ರಕರಣದ ಸತ್ಯಾಸತ್ಯತೆಯ ಜೇಷ್ಠತೆ ಮೇಲೆ ಚರ್ಚೆ ಮಾಡಿಲ್ಲ. ಸಿಬಿಐ ತನಿಖೆಗೆ ಅನುಮತಿ ನೀಡುವಾಗ ಆಗಿದ್ದಂತಹ ಲೋಪಗಳ ಬಗ್ಗೆಯಷ್ಟೇ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
ಸರ್ಕಾರ ನಿರ್ಧಾರ ಕೈಗೊಂಡಿದೆ ಈ ಕುರಿತು ಎರಡು-ಮೂರು ದಿನಗಳಲ್ಲಿ ಸರ್ಕಾರಿ ಆದೇಶ ಹೊರಡಿಸುತ್ತೇವೆ. ನ್ಯಾಯಾಲಯಕ್ಕೂ ಸಂಪುಟ ಸಭೆಯ ನಿರ್ಧಾರವನ್ನು ತಿಳಿಸಿ ಹಿಂದಿನ ಸರ್ಕಾರ ಮಾಡಿದ್ದು ಸರಿಯಲ್ಲ ಎಂದು ಮನವರಿಕೆ ಮಾಡಿಕೊಡುತ್ತೇವೆ ಸಿಬಿಐ ಮತ್ತು ನ್ಯಾಯಾಲಯ ಯಾವ ತೀರ್ಮಾನಕ್ಕೆ ಬರಲಿದೆಯೋ ಗೊತ್ತಿಲ್ಲ. ಆದರೆ,ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಖ್ಯಕಾರ್ಯದರ್ಶಿ ಅವರಿಗೆ ಮೌಖಿಕ ಸೂಚನೆ ನೀಡಿ ಸಿಬಿಐ ತನಿಖೆಗೆ ಅನುಮತಿ ನೀಡಿದ್ದರು ಈ ಲೋಪ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು
ಯಾವುದೇ ಶಾಸಕರ ವಿರುದ್ಧ ತನಿಖೆ ಅಥವಾ ವಿಚಾರಣೆಗೆ ಮುನ್ನ ವಿಧಾನಸಭಾಧ್ಯಕ್ಷರ ಪೂರ್ವಾನುಮತಿ ಅಗತ್ಯ. ಆದರೆ, ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಆ ರೀತಿಯ ಯಾವ ಪ್ರಕ್ರಿಯೆಗಳನ್ನೂ ಪಾಲನೆ ಮಾಡಲಾಗಿಲ್ಲ.
ಹಿಂದಿನ ಸರ್ಕಾರ ಮಾಡಿದ ಈ ಲೋಪಗಳನ್ನು ನಾವು ಮುಂದುವರೆಸಲು ಸಾಧ್ಯವಿಲ್ಲ. ಅದಕ್ಕಾಗಿ ಸರಿಪಡಿಸುವ ಪ್ರಯತ್ನ ಮಾಡಿದ್ದೇವೆ ಎಂದರು. ಪ್ರಕರಣದ ತನಿಖೆಗೆ ಅನುಮತಿ ನೀಡುವಾಗಲೇ ಆಗ ಅಧಿಕಾರದಲ್ಲಿ ಇದ್ದವರಿಗೆ ಜವಾಬ್ದಾರಿ ಇರಬೇಕಿತ್ತು. ಅದರಲ್ಲೂ ಶಾಸಕರ ವಿರುದ್ಧ ಸಿಬಿಐ ತನಿಖೆಗೆ ವಹಿಸುವಂತಹ ಸೂಕ್ಷ್ಮ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ನ್ಯಾಯಾಲಯದ ವಿಚಾರಣೆ ಎದುರಾಗಬಹುದು, ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷವಾಗಬಹುದು ಎಂಬ ಅರಿವಿನ ಅಗತ್ಯವಿರಬೇಕಿತ್ತು ಎಂದು ಹೇಳಿದರು.
ಸೂಕ್ಷ್ಮ ಪ್ರಕರಣದಲ್ಲಿ ಮುಖ್ಯಮಂತ್ರಿಯವರು ಮೌಖಿಕ ಸೂಚನೆ ನೀಡಿ ಮುಖ್ಯ ಕಾರ್ಯದರ್ಶಿಯವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುತ್ತಾರೆ ಎಂದರೆ ಇದು ರಾಜಕೀಯ ಪ್ರೇರಿತವಲ್ಲವೇ ?ಲಿಖಿತ ಸೂಚನೆ ಇಲ್ಲದೆ ಮೌಖಿಕ ಆದೇಶದ ಮೇಲೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರೆ ಅದನ್ನು ಏನೆಂದು ಭಾವಿಸಬೇಕೆಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದಲ್ಲಿನ ಅಡ್ವೋಕೇಟ್ ಜನರಲ್ ಅವರು ಈ ಪ್ರಕರಣ ಸಿಬಿಐ ತನಿಖೆಗೆ ಸೂಕ್ತವಲ್ಲ,ಸ್ಥಳೀಯ ಪೊಲೀಸರೇ ಈ ಆರೋಪದ ಬಗ್ಗೆ ತನಿಖೆ ನಡೆಸಬಹುದು ಎಂದಿದ್ದರು. ನಮ್ಮ ಸರ್ಕಾರದ ಅಡ್ವೋಕೇಟ್ ಜನರಲ್ ಕೂಡ ಇದೇ ಅಭಿಪ್ರಾಯ ಹೇಳಿದ್ದಾರೆ. ಅದರ ಆಧಾರದ ಮೇಲೆ ನಾವು ಪ್ರಕ್ರಿಯೆಗಳಲ್ಲಿನ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.
ರಾಜ್ಯ ಸರ್ಕಾರ ಪ್ರಕರಣದಲ್ಲಿನ ಸತ್ಯಾಸತ್ಯತೆ ಬಗ್ಗೆ ಚರ್ಚಿಸಲು ಹೋಗಿಲ್ಲ. ಡಿ.ಕೆ.ಶಿವಕುಮಾರ್ ಅವರು ಅಕ್ರಮ ಆಸ್ತಿ ಮಾಡಿದ್ದಾರೆಯೇ ? ಹೇಗೆ ಸಂಪಾದಿಸಿದ್ದಾರೆ ಎಂಬ ಬಗ್ಗೆ ನಾವು ಒಂದು ಪದವನ್ನೂ ಪ್ರಸ್ತಾಪಿಸಿಲ್ಲ. ಪ್ರಕ್ರಿಯೆಗಳ ಪಾಲನೆಯಲ್ಲಿ ನಷ್ಟವಾದಾಗ ಅದನ್ನು ಸರಿಪಡಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿರುತ್ತದೆ ಎಂದು ವಿವರಿಸಿದರು.
ಸಂಪುಟದ ನಿರ್ಣಯದ ಬಗ್ಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಯಾವ ರೀತಿ ಬೇಕಾದರೂ ವ್ಯಾಖ್ಯಾನ ಮಾಡಿಕೊಳ್ಳಬಹುದು. ನಮಗೆ ಅದರ ಬಗ್ಗೆ ಚಿಂತನೆ ಇಲ್ಲ. ಕಾನೂನಾತ್ಮಕವಾಗಿ ಸರಿಯಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂಬುದಷ್ಟೇ ನಮ್ಮ ಸಂದೇಶ ಎಂದರು.
ಸಂವಿಧಾನ ಬದ್ಧ ಕ್ರಮ:
ಇದರ ಬೆನ್ನಲ್ಲೇ ಈ ಕುರಿತಾದ ದಾಖಲೆಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಹಿಂದಿನ ಸರ್ಕಾರದ ನಿರ್ಧಾರವನ್ನು ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆದ ಬಳಿಕ ಬಿಜೆಪಿಯ ನಾಯಕರು ಸಂವಿಧಾನಕ್ಕೆ ಅಪಚಾರವಾಗಿದೆ ಎಂದು ದೊಡ್ಡ ಮಟ್ಟದಲ್ಲಿ ಟೀಕೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಸಂವಿಧಾನವನ್ನು ಗೌರವಿಸುತ್ತದೆ. ಅದರಂತೆ ನಡೆದುಕೊಳ್ಳುತ್ತದೆ. ಬಿಜೆಪಿಯವರು ನಿಯಮಾವಳಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಅನುಮತಿ ನೀಡಿದ್ದರು. ಇದರ ಹಿಂದೆ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರನ್ನು ಹತ್ತಿಕ್ಕುವ ರಾಜಕೀಯಪ್ರೇರಿತ ದುರದ್ದೇಶವಿತ್ತು ಎಂದು ಆರೋಪಿಸಿದರು.
75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಕ್ರಮ ಆಸ್ತಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಉದಾರಹಣೆಗಳಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಆತುರಾತುರವಾಗಿ ಯಾವ ಕಾರಣಕ್ಕೆ ನಿರ್ಧಾರ ಕೈಗೊಳ್ಳಲಾಯಿತು ಎಂಬುದಕ್ಕೆ ಬಿಜೆಪಿಯವರು ಉತ್ತರಿಸಬೇಕು ಎಂದು ಸವಾಲು ಹಾಕಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರ ವಿರುದ್ದವೂ ಬಿಜೆಪಿ ಅಧಿಕಾರಕ್ಕೆ ಬಂದ 9 ವರ್ಷಗಳಿಂದಲೂ ರಾಜಕೀಯ ಕಾರಣಕ್ಕಾಗಿ ಸಿಬಿಐ, ಇಡಿ, ಆದಾಯ ತೆರಿಗೆ ಸೇರಿದಂತೆ ಒಂದಿಲ್ಲೊಂದು ತನಿಖೆ ನಡೆಯುತ್ತಿವೆ. ಚುನಾವಣೆ ವೇಳೆ ಕಾಂಗ್ರೆಸಿಗರ ಮೇಲೆ ಐಟಿ ದಾಳಿಗಳಾಗುತ್ತವೆ. ಅದೇ ಬಿಜೆಪಿ ಯವರು ದರೋಡೆ ಮಾಡಿರಲಿ, ಕೊಲೆ ಮಾಡಿದ್ದರೂ ಕೂಡ ಯಾವುದೇ ಕ್ರಮಗಳಾಗುವುದಿಲ್ಲ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಪ್ರಕರಣದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಯಡಿಯೂರಪ್ಪ ವಿರುದ್ಧ ಇರುವ ಪ್ರಕರಣ, ಬಿಟ್ ಕಾಯಿನ್ ಹಗರಣ, ವಿಜಯೇಂದ್ರ ಅವರ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ಏಕೆ ಪ್ರಸ್ತಾಪ ಮಾಡುವುದಿಲ್ಲ, ಸಿಬಿಐ ತನಿಖೆಗೆ ಏಕೆ ಒತ್ತಾಯಿಸುವುದಿಲ್ಲ ಎಂದು ಪ್ರಶ್ನಿಸಿದರು.