ಮೈಸೂರು,ಜೂ.26- ಹುಣಸೂರಿನಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಬಂಧಪಟ್ಟಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತೌಸಿಫ್ (30) ಹಾಗೂ ಒಬ್ಬ ಬಾಲಕ ಬಂಧಿತರು.ಪ್ರಕರಣದ ಸಂಬಂಧ ಈಗಾಗಲೇ ಅಭಿಷೇಕ್ (26) ಅಲಿಯಾಸ್ ಅಭಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿ ಅಭಿ ನೀಡಿದ ಹೇಳಿಕೆ ಆಧರಿಸಿ ಮತ್ತಿಬ್ಬರನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜೂ 22ರಂದು ಹಣದ ಆಸೆಗಾಗಿ ಮೂವರು ಆರೋಪಿಗಳು ಹುಣಸೂರಿನ ವಿಶ್ವೇಶ್ವರಯ್ಯ ಸರ್ಕಲ್ನ ಎಸ್.ಎಸ್.ಸಾಮಿಲ್ನ ಕಾವಲುಗಾರರಾದ ವೆಂಕಟೇಶ್ (75) ಹಾಗೂ ಮಾನಸಿಕ ಅಸ್ವಸ್ಥ ಷಣ್ಮುಗಂ (65) ನನ್ನು ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದರು.
ಕೊಲೆ ಬಳಿಕ ಮೃತರ ಜೇಬನ್ನು ಪರಿಶೀಲಿಸಿ ಅದರಲ್ಲಿ ಸಿಕ್ಕ 488 ರೂ ಹಣವನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿಗಳನ್ನು ಪರಿಶೀಲಿಸಿ ಘಟನೆ ನಡೆದ 36 ಘಂಟೆಗಳ ಒಳಗಾಗಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಭಿಷೇಕ್ ಈ ಹಿಂದೆ ಹುಣಸೂರು ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ನಡೆದ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Latest Kannada News