ಬೆಂಗಳೂರು. ಜ,15: ಜಾತ್ಯತೀತ ಜನತಾದಳದ ಭದ್ರಕೋಟೆ ಎನಿಸಿರುವ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಕುತೂಹಲ ಕೆರಳಿಸಿದೆ.
ಜೆಡಿಎಸ್ ಹೊಸ ಉತ್ಸಾಹದೊಂದಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮುಂದಡಿ ಇಟ್ಟಿದೆ. ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡ ಹಾಸನ ಕ್ಷೇತ್ರದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತೆ ಕಣಕ್ಕಿಳಿಯಲಿದ್ದಾರೆ ಎಂದು ಘೋಷಿಸಿದ್ದಾರೆ.
ಆದರೆ ಪ್ರಜ್ವಲ್ ರೇವಣ್ಣ ವಿರುದ್ಧ ಆಡಳಿತ ವಿರೋಧಿ ಅಲೆಯ ಜೊತೆಗೆ ಜಾತ್ಯಾತೀತ ಜನತಾದಳ ಕಾರ್ಯಕರ್ತರೇ ತೀವ್ರ ಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹಾಲಿ ಶಾಸಕರು ಕೂಡ ಪ್ರಜ್ವಲ್ ಅವರ ಸ್ಪರ್ಧೆಗೆ ಒಲ್ಲದ ಮನಸ್ಸಿನಿಂದ ಸಮ್ಮತಿ ನೀಡಿದ್ದಾರೆ.
ಇನ್ನು ಬಿಜೆಪಿ ಕಾರ್ಯಕರ್ತರು ಪ್ರಜ್ವಲ್ ರೇವಣ್ಣ ಅವರನ್ನು ಅಭ್ಯರ್ಥಿಯಾಗಿ ಒಪ್ಪಿಕೊಳ್ಳಲು ಕಷ್ಟ ಪಡುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಹಾಸನದಿಂದ ಪ್ರಜ್ವಲ್ ರೇವಣ್ಣ ಮತ್ತೊಮ್ಮೆ ಸ್ಪರ್ಧೆ ಮಾಡಿದರೆ ಅವರ ಗೆಲುವು ಕಠಿಣವಾಗಲಿದೆ ಎಂಬ ವರದಿಗಳಿವೆ.
ಇದರ ಜೊತೆಗೆ, ಜೆಡಿಎಸ್ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸಮೀಕ್ಷೆ ನಡೆಸಿದ್ದು ಎಲ್ಲದರಲ್ಲೂ ಪ್ರಜ್ವಲ್ ರೇವಣ್ಣ ಬರುತ್ತವೆ ವರದಿಗಳು ಬಂದಿದೆ ಹೀಗಾಗಿ ಬಿಜೆಪಿ ನಾಯಕರು ಇದೀಗ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡುವಂತೆ ಜನತಾದಳದ ನಾಯಕರ ಮೇಲೆ ಒತ್ತಡ ಹೇರ ತೊಡಗಿದ್ದಾರೆ.
ಹಾಲಿ ಸಂಸದ ಪ್ರಜ್ಬಲ್ ರೇವಣ್ಣ ಸ್ಪರ್ಧೆಗೆ ಜೆಡಿಎಸ್ ಹಿರಿಯ ನಾಯಕರಿಂದಲೂ ಅಪಸ್ವರ ವ್ಯಕ್ತವಾಗಿದೆ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದು, ದೇವೇಗೌಡರೇ ಸ್ಪರ್ಧೆ ಮಾಡಲಿ ಅನ್ನೋದು ಹಾಸನ ನಾಯಕರ ಒತ್ತಡ. ವಯಸ್ಸು ಮತ್ತು ಆರೋಗ್ಯದ ದೃಷ್ಠಿಯಿಂದ ದೇವೇಗೌಡರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ ಜೆಡಿಎಸ್ ಪಾಳಯದಲ್ಲಿ ಪರ್ಯಾಯ ನಾಯಕನಿಗಾಗಿ ಹುಡುಕಾಟ ಆರಂಭವಾಗಿದೆ.
ಇದರ ಬೆನ್ನಲ್ಲೇ ಬಿಜೆಪಿಯ ಕೆಲ ನಾಯಕರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನು ಸಂಪರ್ಕಿಸಿ ಹಾಸನ ಲೋಕಸಭಾ ಕ್ಷೇತ್ರ ತಮ್ಮ ಕುಟುಂಬದ ಭದ್ರಕೋಟೆಯಾಗಿದೆ ಹೀಗಾಗಿ ತಮ್ಮ ಕುಟುಂಬಕ್ಕೆ ಸೇರಿದವರೇ ಇಲ್ಲಿಂದ ಸ್ಪರ್ಧೆ ಮಾಡುವುದು ಸೂಕ್ತ.
ಈ ಹಿನ್ನೆಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿ ನಿವೃತ್ತರಾಗುತ್ತಿರುವ ಡಾ. ಸಿ.ಎನ್. ಮಂಜುನಾಥ್ ಅವರನ್ನು ಕಣಕ್ಕಿಳಿಸುವಂತೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಕೇಂದ್ರದಲ್ಲಿ ಎನ್ ಡಿಎ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತ ಆಗೊಂದು ವೇಳೆ ಸರ್ಕಾರ ರಚನೆಯಾದಲ್ಲಿ ಡಾ. ಮಂಜುನಾಥ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಖಚಿತವಾಗಲಿದೆ ವೈದ್ಯರಾಗಿ ಹಾಗೂ ಆಡಳಿತ ನಿಪುಣರಾಗಿ ಕೂಡ ಉತ್ತಮ ಸಾಧನೆ ಮಾಡಿರುವ ಡಾಕ್ಟರ್ ಮಂಜುನಾಥ್ ಅವರ ಸೇವೆಯನ್ನು ಬಿಜೆಪಿ ಸೂಕ್ತವಾಗಿ ಬಳಸಿಕೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಲೋಕಸಭಾ ಚುನಾವಣೆಯ ಕಣಕ್ಕಿಳಿಸಬೇಕು ಎಂದು ಆಗ್ರಹ ಮಾಡತೊಡಗಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿರುವ ಡಾ. ಮಂಜುನಾಥ್ ಅವರ ಆಡಳಿತ ಅವಧಿ ಪೂರ್ಣಗೊಂಡಿದ್ದು ಅವರ ಸೇವೆಯನ್ನು ವಿಸ್ತರಣೆ ಮಾಡುವ ಯಾವುದೇ ಲಕ್ಷಣಗಳು ಸರ್ಕಾರದ ಮಟ್ಟದಲ್ಲಿ ಕಾಣುತ್ತಿಲ್ಲ . ನೂತನ ನಿರ್ದೇಶಕರ ಆಯ್ಕೆಗಾಗಿ ಈಗಾಗಲೇ ಅರ್ಜಿ ಆಹ್ವಾನಿಸಿದ್ದು ಆಯ್ಕೆ ಸಮಿತಿ ಕೂಡ ರಚನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಡಾ. ಮಂಜುನಾಥ್ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತಂದು ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದರೆ ಜೆಡಿಎಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲಿದೆ.
ಹಾಗೆಯೇ ಕೇಂದ್ರ ಸಂಪುಟದಲ್ಲೂ ಕೂಡ ಸ್ಥಾನ ಪಡೆದುಕೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ವಿಷಯದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ನಿರ್ಧಾರಕ್ಕೆ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.