ಬೆಂಗಳೂರಿನ ಹೊರವಲಯದಲ್ಲಿರುವ ಸೌಖ್ಯ ಪೂರ್ಣ ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ. ಮಥಾಯಿ ಅವರು ಅನೇಕ ದಶಕಗಳಿಂದ ತಮ್ಮ ವಿಶಿಷ್ಟ ಚಿಕಿತ್ಸಾ ಪದ್ದತಿಯ ಮೂಲಕ ಬ್ರಿಟಿಷ್ ರಾಜಮನೆತನದ ಸದಸ್ಯರಿಗೆ ಆರೋಗ್ಯ ಸೇವೆ ನೀಡುತ್ತಿರುವುದು ಅನೇಕರಿಗೆ ಗೊತ್ತಿದೆ. ಕೆಲವು ವರ್ಷಗಳ ಹಿಂದೆ ಬ್ರಿಟಿಷ್ ರಾಜ ಮನೆತನದ ಸದಸ್ಯರು ಅದರಲ್ಲೂ ಮುಖ್ಯವಾಗಿ ಪ್ರಿನ್ಸ್ ಚಾರ್ಲ್ಸ್ ಅವರು ಇವರ ಸೌಖ್ಯ ಸಂಸ್ಥೆಗೆ ಭೇಟಿ ನೀಡಿದ್ದು ಸುದ್ದಿಯಾಗಿತ್ತು. ಈಗ ರಾಣಿ ಎರಡನೇ ಎಲಿಜಬೆತ್ ಅವರ ನಿಧನದ ಸಂದರ್ಭದಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆಹ್ವಾನಿಸಲ್ಪಟ್ಟು ಡಾ. ಮಥಾಯಿ ಅವರು ಲಂಡನ್ ಗೆ ತೆರಳಿದ್ದಾರೆ. ಅಲ್ಲಿ ಅವರು ಇಂಗ್ಲೆಂಡಿನ ಇಂದಿನ ರಾಜ ಮೂರನೇ ಚಾರ್ಲ್ಸ್ ಮತ್ತು ಅವರ ಪತ್ನಿ ರಾಣಿ ಕ್ಯಾಮಿಲಾ ಅವರನ್ನು ಭೇಟಿಯಾಗಿ ಚಹಾ ಸೇವನೆ ಮಾಡಿದರು ಎಂದು ತಿಳಿದು ಬಂದಿದೆ. ಮಥಾಯಿ ಸೋಮವಾರ ನಡೆಯುವ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವರೆಂದೂ ತಿಳಿದುಬಂದಿದೆ.