ಬೆಂಗಳೂರು, ಅ.8 – ರಾಜಧಾನಿ ಮಹಾನಗರಿ ಬೆಂಗಳೂರು ಹೊರವಲಯದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಪಟಾಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. ಭಾನುವಾರ ಬೆಳಿಗ್ಗೆ 14ನೇ ಮೃತದೇಹ ಹೊರಗೆ ತೆಗೆದಿರುವ ಸಿಬ್ಬಂದಿ, ಆಸ್ಪತ್ರೆ ಸಾಗಿಸಿದ್ದಾರೆ.
14 ಮೃತದ ಪೈಕಿ ಎಂಟು ಮೃತದೇಹಗಳ ಗುರುತು ಮಾತ್ರ ಪತ್ತೆ ಆಗಿದೆ. ಇತರರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟಾಕಿ ದುರಂತ (Firecracker Tragedy) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುರಂತ ಸಂಭವಿಸಿದ ಬಾಲಾಜಿ ಟ್ರೇಡರ್ಸ್ ಮಳಿಗೆಯ ಮಾಲೀಕರಾದ ವಿ. ರಾಮಸ್ವಾಮಿ ರೆಡ್ಡಿ ಹಾಗೂ ನವೀನ್ ಅವರನ್ನು ಬಂಧಿಸಿದ್ದಾರೆ.
ಸ್ಫೋಟಕ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಚ್‌ಎಸ್ಆರ್ ಲೇಔಟ್ ನಿವಾಸಿ ಜಯಮ್ಮ ಹಾಗೂ ಅವರ ಮಗ ಅನಿಲ್ ರೆಡ್ಡಿ ಅವರ ಹೆಸರಿನಲ್ಲಿರುವ ಜಾಗದಲ್ಲಿ ಪಟಾಕಿ ಅಂಗಡಿ ಇತ್ತು’ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
‘ಪ್ರಕರಣ ದಾಖಲಿಸಿಕೊಂಡು ಅಪ್ಪ ರಾಮಸ್ವಾಮಿ ರೆಡ್ಡಿ ಹಾಗೂ ಮಗ ನವೀನ್‌ನನ್ನು ಬಂಧಿಸಲಾಗಿದೆ. ಗಾಯಗೊಂಡಿರುವ ನವೀನ್ ಸದ್ಯ ಆಸ್ಪತ್ರೆಯಲ್ಲಿದ್ದು, ನಮ್ಮ ಕಸ್ಟಡಿಯಲ್ಲಿದ್ದಾರೆ’ ಎಂದರು.
ಅಧಿಕಾರಿಗಳ ವಿರುದ್ಧ ಕ್ರಮ:
ಸ್ಥಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ದುರಂತದ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುವುದು, ಮಳಿಗೆ ತೆರೆಯಲು ಅನುಮತಿ ನೀಡಿದ್ದ ಎಲ್ಲ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಪಟಾಕಿ ಮಳಿಗೆ ಇದೆ. ಯಾರೆಲ್ಲ ಅನುಮತಿ ಕೊಡುವ ಪ್ರಕ್ರಿಯೆಯಲ್ಲಿ ಇದ್ದರೆಂಬುದನ್ನು ತಿಳಿಯುತ್ತೇವೆ. ಇದಕ್ಕಾಗಿ ತನಿಖೆ ನಡೆಸುತ್ತೇವೆ. ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು ಹಾಗೂ ಇತರೆ ಯಾವುದೇ ಅಧಿಕಾರಿಗಳು ಇದ್ದರೂ ಅವರ ವಿರುದ್ಧ ಕ್ರಮ ಖಚಿತ’ ಎಂದರು.
ರಾಜ್ಯದಲ್ಲಿ ಪಟಾಕಿ ಮಳಿಗೆ ಸ್ಥಾಪನೆ ನಿಯಮಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಿಯಮ ತಿದ್ದುಪಡಿ ಬಗ್ಗೆಯೂ ಚರ್ಚಿಸಲಾಗುವುದು’ ಎಂದು ಹೇಳಿದರು.
ಪಟಾಕಿ ಅಂಗಡಿಯಲ್ಲಿ ಸುಮಾರು 35 ಜನ ಕೆಲಸ ಮಾಡುತ್ತಿದ್ದರು. ಏಕಾಏಕಿ ಬೆಂಕಿ ಆವರಿಸಿದ್ದು, ಅಂಗಡಿಯೊಳಗೆ ಇದ್ದ 14 ಜನರು ಹೊರಗೆ ಬರಲು ಆಗಿಲ್ಲ. ಬೆಂಕಿ ಹಾಗೂ ಹೊಗೆ ಆವರಿಸಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಇನ್ನು ಘಟನೆ ಸಂಬಂಧ ಮಾಲೀಕ ಹಾಗೂ ಅವರ ಮಗನನ್ನು ಬಂಧಿಸಲಾಗಿದೆ. ಒಟ್ಟು ಐವರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರು ನಗರ ಸೇರಿ ಇತರೆಡೆ ಇಂತಹ ಅಕ್ರಮ ಮಳಿಗೆಗಳು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇವೆ. ದುರಂತ ಸಂಬಂಧ ಟ್ರಕ್ ಮಾಲೀಕನ್ನು ಕೂಡ ವಶಕ್ಕೆ ಪಡೆಯುತ್ತೇವೆ. ಲೈಸೆನ್ಸ್ ನೀಡುವಾಗ ಅಧಿಕಾರಿಗಳು ಕೂಡ ಪರಿಶೀಲನೆ ಮಾಡಬೇಕಿತ್ತು. ಇದರಲ್ಲಿ ಅಧಿಕಾರಿಗಳ ತಪ್ಪು ಇದ್ದರೆ ಅವರ ಮೇಲೆಯೂ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಮೃತದೇಹ ರವಾನೆ:
ತಮಿಳುನಾಡಿನ ಅಮಾಪೇಟೈ ಗ್ರಾಮದಲ್ಲಿ ಮೃತ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮಕ್ಕೆ ಮೃತರ ಶವ ರವಾನೆ ಮಾಡಲಾಗುತ್ತದೆ.
ಮೃತರಲ್ಲಿ ಗಿರಿ ಬಿನ್ ವೇಡಿಯಪ್ಪನ್, ಸಚೀನ್ ಬಿನ್ ಲೇಟ್ ವೇಡಿಯಪ್ಪನ್, ವಿಜಯರಾಘವನ್, ವಿಳಂಬರತಿ ಬಿನ್ ಸೆಂದಿಲ್, ಹಾಗೂ ಆಕಾಶ ಬಿನ್ ರಾಜಾ, ವೇಡಿಯಪ್ಪನ್, ಆದಿಕೇಶವ ಬಿನ್ ಪೆರಿಯಾಸ್ವಾಮಿ ಇವೆರಲ್ಲರೂ ಧರ್ಮಪುರಿ ಜಿಲ್ಲೆಯ ಅಮ್ಮಾಪೇಟ್ ನಿವಾಸಿಗಳಾಗಿದ್ದಾರೆ. ಪ್ರಕಾಶ್ ಬಿನ್ ರಾಮು ಇವರು ತಿರುವಣ್ಣಾಮಲೈ ಮೂಲದವರಾಗಿದ್ದಾರೆ.
ಗುರುತು ಪತ್ತೆ:
ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್, ಪ್ರಭಾಕರನ್ ಬಿನ್ ಗೋಪಿನಾಥ್ ಈ ಮೇಲ್ಕಂಡ ಮೂವರು ಕಲ್ಕುರ್ಚಿ ಜಿಲ್ಲೆಯ ವೆಡುತ್ತ ವೈನತ್ತಂ ಮೂಲವದರು. ನಿತಿಶ್, ಬಿನ್ ಮೇಘನಾಥ್ , ಸಂತೋಷ್ ಬಿನ್ ಕುಮಾರ್ ಈ ಇಬ್ಬರು ತಿರುಪತ್ತೂರು ಜಿಲ್ಲೆಯ ವೆಲ್ಲಕುಟೈ ಗ್ರಾಮದವರು. ಮತ್ತೊಬ್ಬನ ಹೆಸರು ವಿಳಾಸ ಪತ್ತೆ ಆಗಿಲ್ಲ.
ಕಮರಿದ ಕನಸು:
ಪಟಾಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿದೆ. ಇದರಲ್ಲಿ ಆರು ಮಂದಿ ವಿದ್ಯಾರ್ಥಿಗಳು ಸೇರಿದ್ದಾರೆ.
ಪದವಿ ಮತ್ತು ಪಿಯುಸಿ ಓದುತ್ತಿದ್ದ ಈ ಮಕ್ಕಳು ಬಡ ಕುಟುಂಬದವರು. ಇವರ ತಂದೆ-ತಾಯಂದಿರು ಕೂಲಿ ಕೆಲಸ ಮಾಡುವವರು.
ದೀಪಾವಳಿ ಹಬ್ಬಕ್ಕಾಗಿ ಕುಟುಂಬದ ಖರ್ಚಿಗೆ ಮತ್ತು ಓದಿನ ಖರ್ಚಿಗೆ ನಾಲ್ಕು ಕಾಸು ಮಾಡಿಕೊಳ್ಳಲು ಪ್ರತಿ ವರ್ಷದಂತೆ ಈ ಬಾರಿಯೂ ಕೆಲಸಕ್ಕೆ ಬಂದಿದ್ದರು. ಆದರೆ ಆ ಜೀವಗಳ ಜೊತೆ ಅವರ ಕನಸುಗಳು ಈಗ ಸುಟ್ಟು ಕರಕಲಾಗಿವೆ.
ಪೊಲೀಸ್ ಆಗಬೇಕೆಂಬ ಕನಸು ಹೊತ್ತು ಪೋಷಕರಲ್ಲಿ ಭರವಸೆ ಮೂಡಿಸಿದ್ದ ಯುವಕನೊಬ್ಬ ದುರಂತದಲ್ಲಿ ಬಲಿಯಾಗಿದ್ದಾನೆ.
ತಮ್ಮ ಮಕ್ಕಳ ಬಗ್ಗೆ ನಾನಾ ಕನಸು ಕಂಡಿದ್ದ ಹೆತ್ತ ಜೀವಿಗಳು ಸುಟ್ಟು ಕರಕಲಾಗಿರುವ ದೇಹಗಳ ಕಂಡು ಕಂಗಾಲಾಗಿದ್ದಾರೆ. ಶವಗಾರದ ಮುಂದೆ ಹೆತ್ತವರು ಗೋಳಾಡುತ್ತಿರುವ ದೃಶ್ಯಗಳು ಕರುಳು ಹಿಂಡಿವಂತಿವೆ.
ದುರಂತದಲ್ಲಿ ಮೃತಪಟ್ಟ 14 ಮಂದಿ ಪೈಕಿ ಎಂಟು ಮಂದಿ ಒಂದೇ ಊರಿನವರು. ಧರ್ಮಪುರಿ ಜಿಲ್ಲೆಯು ಅಮ್ಮಪೇಟೆಯ ಎಂಟು ಮಂದಿ, ತಿರುಪ್ಪೂರು ಜಿಲ್ಲೆ ವಾಣಿ ಅಂಬಾಡಿಯ ಇಬ್ಬರು ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಇವರೆಲ್ಲರು ಕೃಷಿಕರು ಮತ್ತು ಕೃಷಿ ಕೂಲಿ ಕಾರ್ಮಿಕರು.
ದೀಪಾವಳಿ ಹಬ್ಬದ ಒಂದು ತಿಂಗಳು ಮುನ್ನವೇ ಅತ್ತಿಬೆಲೆ ಪಟಾಕಿ ಗೋದಾಮು ಮತ್ತು ಮಳಿಗೆಗಳಿಗೆ ಕೂಲಿ ಮಾಡಲು ಬಂದವರು ಕೈತುಂಬಾ ಹಣದೊಂದಿಗೆ ಖುಷಿಯಿಂದ ಹಿಂದಿರುಗುತ್ತಿದ್ದರು. ಆದರೆ, ಈ ಬಾರಿ ಹಿಂದಿರುಗುವ ಅದೃಷ್ಟ ಅವರಿಗೆ ಇರಲಿಲ್ಲ. ಮಗ ದುಡಿದು ಹಣ ತರುತ್ತಾನೆ ಎಂದು ಎದುರು ನೋಡುತ್ತಿದ್ದ ಪೋಷಕರು ನಿನ್ನೆಯ ದುರಂತದ ನಂತರ ಪಾತಾಳಕ್ಕೆ ಕುಸಿದಿದ್ದಾರೆ. ಅವರನ್ನು ಸಂತೈಸಲು ಯಾರಿಗೂ ಪದಗಳು ಸಿಗುತ್ತಿಲ್ಲ.