ಬೆಳಗಾವಿ,ಡಿ.15- ರಾಜ್ಯದಲ್ಲಿ ಮುಂದಿನ ವರ್ಷವು ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಎದುರಾಗಬಹುದಾದ ಸಂಭಾವ್ಯ ಬರ ಪರಿಸ್ಥಿತಿಯನ್ನು (Drought) ನಿಭಾಯಿಸಲು ಅಗತ್ಯ ಅನುದಾನ ಮೀಸಲಿಡಬೇಕು ಎಂದು ಪಕ್ಷೇತರ ಸದಸ್ಯ ದರ್ಶನ್ ಪ್ಮಟ್ಟಣ್ಣಯ್ಯ ವಿಧಾನಸಭೆಯಲ್ಲಿ ಆಗ್ರಹಿಸಿದ್ದಾರೆ.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಮುಂದಿನ ವರ್ಷ ಮಳೆ ಕೊರತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎದುರಾಗುವ ಬರ ಪರಿಸ್ಥಿತಿಯನ್ನು ನಿಭಾಯಿಸಲು
ಹೇಗೆ ನಿಭಾಯಿಸಬೇಕೆನ್ನುವ ಬಗ್ಗೆ ರಾಜ್ಯ ಸರಕಾರ ಆಲೋಚಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿನ ತೀವ್ರ ಸ್ವರೂಪದ ಬರ ಪರಿಸ್ಥಿತಿಯ ಬಗ್ಗೆ ಈಗಾಗಲೇ ಚರ್ಚೆ ನಡೆದಿದ್ದು, ಸರಕಾರ ಬರ ನಿರ್ವಹಣೆಗೆ ಕ್ರಮ ವಹಿಸಿದೆ. ಆದರೆ, ಬರ ಸ್ಥಿತಿ ಎದುರಾಗದ ರೀತಿಯಲ್ಲಿ ಮುನ್ನಚ್ಚರಿಕೆ ವಹಿಸಿದರೆ ಮಾತ್ರ ಬರ ನಿರ್ವಹಣೆ ಸಾಧ್ಯ. ಬರ ಬಂದ ಬಳಿಕ ಎಚ್ಚರಗೊಳ್ಳುವ ಬದಲು, ಬರ ಪರಿಸ್ಥಿತಿ ಸೃಷ್ಟಿಯಾಗದ ರೀತಿಯಲ್ಲಿ ಇಂದಿನಿಂದಲೇ ಸರಕಾರ ಆಸ್ಥೆ ವಹಿಸಬೇಕು ಎಂದು ಮನವಿ ಮಾಡಿದರು.
ಎನ್‌ಡಿಆರ್‌ಎಫ್, ಎಸ್‌ಟಿಆರ್‌ಎಫ್ ಅಡಿಯಲ್ಲಿ ಬರ ಪರಿಸ್ಥಿತಿ ಪರಿಹಾರ ಕಲ್ಪಿಸುವ ಬದಲಿಗೆ, ಬರ ಸ್ಥಿತಿ ಎದುರಾಗದ ರೀತಿಯಲ್ಲಿ ಮುನ್ನಚ್ಚರಿಕೆ ವಹಿಸಿದರೆ ಅನುಕೂಲ ಆಗಲಿದೆ. ಮಾತ್ರವಲ್ಲ, ಜನರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರಕಾರ ಕಾರ್ಯ ಪ್ರವೃತ್ತಗೊಳ್ಳಬೇಕು. ಬರ ಸ್ಥಿತಿ ಬಾದಿಸದಂತೆ ಮುನ್ನಚ್ಚರಿಕೆ ವಹಿಸಲು ಪ್ರತ್ಯೇಕ ಸಮಿತಿ ರಚನೆಯನ್ನು ಮಾಡಬೇಕು ಎಂದು ದರ್ಶನ್ ಪುಟ್ಟಣ್ಣಯ್ಯ ಆಗ್ರಹಿಸಿದರು.
ಬಳಿಕ ಸರಕಾರದ ಪರವಾಗಿ ಉತ್ತರ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು,ಮುಂದಿನ ವರ್ಷ ಮತ್ತೆ ಎದುರಾಗುವ ಬರ ಪರಿಸ್ಥಿತಿ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.