ಬೆಂಗಳೂರು,ಸೆ.17- ಮಾದಕ ಸರಬರಾಜು ದಂಧೆ ಮೂಲಕ ಗಳಿಸಿದ್ದ ಆರೋಪಿಯ ಆಸ್ತಿಯನ್ನು ಸಿಸಿಬಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಜೋಡಿಪುರದ ಮೃತ್ಯುಂಜಯ(53) ಗಳಿಸಿದ್ದ ಆಸ್ತಿ ಜಪ್ತಿ ಮಾಡುವ ಮೂಲಕ ಡ್ರಗ್ಸ್ ದಂಧೆಕೋರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮೃತ್ಯುಂಜಯ ಎಂಬ ಆರೋಪಿ ಮಾದಕ ಸರಬರಾಜು ದಂಧೆಯಿಂದ ಗಳಿಸಿದ್ದ 1 ಕೋಟಿ 60 ಲಕ್ಷ ಮೌಲ್ಯದ ಆಸ್ತಿಯನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಕಳೆದ 2007ರಿಂದಲೂ ಸುಮಾರು 9 ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮೃತ್ಯುಂಜಯ ಇದೇ ವರ್ಷ ಜುಲೈನಲ್ಲಿ ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ. ಬಂಧಿತನಿಂದ 80 ಲಕ್ಷ ಮೌಲ್ಯದ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನ ವಶಕ್ಕೆ ಪಡೆಯಲಾಗಿತ್ತು.
ಆರೋಪಿಯ ಹೆಸರಿನಲ್ಲಿದ್ದ ಹೊಸಕೋಟೆ ಟೌನ್ನ 1 ವಾಣಿಜ್ಯ ನಿವೇಶನ, ಕೋಲಾರದ ಕೆಂಚಿಪುರ ಹಾಗೂ ಕಂಬಿಪುರದಲ್ಲಿರು 2 ನಿವೇಶನಗಳು, 6 ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 44,387 ರೂ. ಹಣ ಜಪ್ತಿ ಮಾಡಲಾಗಿದೆ. ಆರೋಪಿಯ ಪತ್ನಿಯ ಬ್ಯಾಂಕ್ ಖಾತೆಗಳಿಗೆ ವಿವಿಧ ಮೂಲದಿಂದ 5 ಕೋಟಿಗೂ ಅಧಿಕ ಹಣ ಅಕ್ರಮವಾಗಿ ಸಂದಾಯವಾಗಿರುವುದು ಸಹ ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ
Previous Articleನಾಪತ್ತೆಯಾಗಿದ್ದ ಪೇದೆ ಶವವಾಗಿ ಪತ್ತೆ
Next Article ತಮಟೆ ಬಾರಿಸಿ ಪತ್ತೆ ಹಚ್ಚಿದರು