ಬೆಂಗಳೂರು,ಜೂ.27-
ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಡ್ರಗ್ಸ್ ಹಾವಳಿ ತೀವ್ರಗೊಂಡಿದೆ.ಆಧುನಿಕ ಮಾದರಿಯ ಡ್ರಗ್ಸ್ ಯುವ ಜನರನ್ನು ದಾಸರನ್ನಾಗಿ ಮಾಡುತ್ತಿವೆ. ಇವುಗಳ ಪತ್ತೆ ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಹೀಗಾಗಿ ಆಧುನಿಕ ವಿಧಾನದ ಮಾದಕ ವಸ್ತುಗಳನ್ನು ಪತ್ತೆ ಮಾಡಲು ಶ್ವಾನಗಳನ್ನು ಬಳಕೆ ಮಾಡಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಇದಕ್ಕಾಗಿ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ.
ಇತ್ತೀಚೆಗೆ ಬೆಂಗಳೂರು ಹೊರವಲಯದ ಅತ್ತಿಬೆಲೆಯ ಬಳಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದಾಗ ಅಲ್ಲಿ ಅಧುನಿಕ ಮಾದಕವಸ್ತುಗಳನ್ನು ಬಳಕೆ ಮಾಡಿರುವುದು
ಪತ್ತೆಯಾಗಿತ್ತು.ಇದರ ಜಾಡು ಹಿಡಿದು ತನಿಖೆ ನಡೆಸಿದಾಗ ಅನೇಕ ಕಡೆ ಆಧುನಿಕ ವಿಧಾನದ ಡ್ರಗ್ಸ್ ಬಳಕೆಯಾಗುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.
ಇದರ ಬೆನ್ನಲ್ಲೇ ಇದರ ಪತ್ತೆಗೆ ತರಬೇತಿ ಪಡೆದ ಶ್ವಾನಗಳನ್ನು ಪೊಲೀಸರು ಬಳಸಲು ತೀರ್ಮಾನಿಸಿದ್ದಾರೆ.
ವಿಶೇಷ ತರಬೇತಿ ಪಡೆದ 5 ಶ್ವಾನಗಳ ಪೈಕಿ 4 ಜರ್ಮನ್ ಶಫರ್ಡ್ ಮತ್ತೊಂದು ಬೀಗಲ್ ತಳಿಯವು. ಬೇರೆ ಬೇರೆ ಮಾದರಿಗಳ ಮೂಲಕ ತರಬೇತುದಾರರು ಈ ನಾಯಿಗಳಿಗೆ ಅಗತ್ಯ ತರಬೇತಿಯನ್ನು ನೀಡಿದ್ದು, 10 ಬಗೆಯ ಮಾದಕ ವಸ್ತುಗಳನ್ನು ಇವು ವಾಸನೆ ಮೂಲಕ ಪತ್ತೆ ಹಚ್ಚಲಿವೆ.
ಶ್ವಾನದಳದ ತರಬೇತಿ ತಂಡದ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಮಾತನಾಡಿ, ನಾಯಿಗಳಿಗೆ 50 ಮೀಟರ್ ದೂರದಿಂದ ಡ್ರಗ್ಸ್ ಪತ್ತೆ ಮಾಡುವ ತರಬೇತಿ ನೀಡಲಾಗಿದೆ. ಇದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮೊದಲೇ ಅವರನ್ನು ಬಂಧಿಸಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಈ ನಾಯಿಗಳಿಗೆ ಮೊದಲ ಹಂತದಲ್ಲಿ ಮಾದಕ ವಸ್ತು ಪತ್ತೆ ಹಚ್ಚುವ ತರಬೇತಿ ನೀಡಲಾಯಿತು. ಬಳಿಕ ಲಗೇಜ್, ಬ್ಯಾಗ್, ಮನುಷ್ಯರು, ವಾಹನ, ಕಟ್ಟಡ ಹೀಗೆ ವಿವಿಧ ಕಡೆ ಸಂಗ್ರಹವಾಗಿರುವ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ತರಬೇತಿ ನೀಡಲಾಗಿದೆ.
ವಿವಿಧ ಪ್ರದೇಶಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟು ಅವುಗಳನ್ನು ಪತ್ತೆ ಹಚ್ಚಲು ನಾಯಿಗಳಿಗೆ ಸೂಚನೆ ನೀಡಲಾಗುತ್ತದೆ. ವಸ್ತು ಪತ್ತೆಯಾದರೆ ಕೆಲವು ನಾಯಿಗಳು ಬಾಲ ಅಲ್ಲಾಡಿಸುವ ಮೂಲಕ ಸೂಚನೆ ನೀಡುತ್ತವೆ. ಕೆಲವು ಬೊಗಳುತ್ತವೆ ಎಂದು ತಿಳಿಸಿದ್ದಾರೆ
Previous ArticleHoney tapper ಬಗ್ಗೆ ಮಾಹಿತಿ ಕೊಟ್ಟ ಶಾಸಕ.
Next Article ಅರಣ್ಯ ಒತ್ತುವರಿ ತಡೆಗೆ Setallite ನೆರವು.