ಬೆಂಗಳೂರು
ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಲು ಆಯೋಗ (Election Commission) ವ್ಯಾಪಕ ಸಿದ್ಧತೆ ನಡೆಸಿದೆ. ಮುಕ್ತ ಹಾಗೂ ಶಾಂತಿಯುತ ಚುನಾವಣೆಗೆ ಪಣ ತೊಟ್ಟಿರುವ ಆಯೋಗ ಅಕ್ರಮ ತಡೆಗಟ್ಟಲು ಹದ್ದಿನ ಕಣ್ಣಿರಿಸತೊಡಗಿದೆ. ವೇಳಾಪಟ್ಟಿ ಘೋಷಣೆಯಾದ ನಂತರ ಮತದಾರರನ್ನು ತಲುಪಲು ಅಭ್ಯರ್ಥಿಗಳು ಮತ್ತು ಪಕ್ಷಗಳು ನಡೆಸುವ ವಾಮಮಾರ್ಗದ ಬಗ್ಗೆ ಅರಿವಿರುವ ಆಯೋಗ ಈಗಾಗಲೇ ಹಣಕಾಸು ವಹಿವಾಟಿನ ಕುರಿತು ನಿಗಾ ವಹಿಸಿದೆ.
ರಾಜ್ಯದ ಪ್ರತಿಯೊಂದು ಬ್ಯಾಂಕ್ ಖಾತೆದಾರರ ವಹಿವಾಟುಗಳ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದೆ. ಚುನಾವಣೆ ಸಮಯದಲ್ಲಿ ಮತದಾರರಿಗೆ ನೇರವಾಗಿ ಹಣ, ಒಡವೆ ಇಲ್ಲವೇ ಬೇರೊಂದು ರೀತಿಯಲ್ಲಿ ಹಂಚಿಕೆ ಮಾಡಿದರೆ ಕಾನೂನು ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಾಗಿ ಇವರುಗಳು ಅನ್ಯ ಮಾರ್ಗ ಹುಡುಕಿರುವುದು ಕಳೆದ ಚುನಾವಣೆ ವೇಳೆ ಪತ್ತೆಯಾಗಿತ್ತು.
ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಸ್ತ್ರೀ ಶಕ್ತಿ ಸಂಘಟನೆಗಳು, ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಒಂದೊಂದು ಸಂಘಟನೆಯಲ್ಲಿ 200ರಿಂದ 300 ಮತದಾರರು ಇರುತ್ತಾರೆ. ಹೀಗಾಗಿ ಅಭ್ಯರ್ಥಿಗಳು ಈಗಲೆ ಅವರೊಂದಿಗೆ ಮಾತುಕತೆ ನಡೆಸಿ, ಮತಕ್ಕೆ ಇಂತಿಷ್ಟು ಎಂದು ಹಣ ನಿಗದಿಪಡಿಸಿ ಸ್ತ್ರೀ ಶಕ್ತಿ ಸಂಘಟನೆಗಳ ಮುಖ್ಯಸ್ಥರ ಖಾತೆಗಳಿಗೆ ಹಣ ಹಾಕುತ್ತಿದ್ದಾರೆ.
ಇದಲ್ಲದೆ ಹಾಲು ಉತ್ಪಾದಕರ ಸಂಘ, ಮಹಿಳಾ ಸಂಘಗಳು, ಯುವಕರ ಸಂಘ ಹೀಗೆ ನಾನಾ ರೀತಿಯಲ್ಲಿ ಮತದಾರರ ಖಾತೆಗಳಿಗೆ ಹಣವನ್ನು ಹಾಕಲಾಗುತ್ತದೆ. ಚುನಾವಣೆ ವೇಳಾಪಟ್ಟಿಗೂ ಮೊದಲೆ ಹಣ ಸಂದಾಯವಾಗುತ್ತಿದ್ದು, ಮತದಾನದ ದಿನ ಸಮೀಪಿಸುವಾಗ ಈ ಹಣವನ್ನು ಮತದಾರರಿಗೆ ತಲುಪಿಸುವ ವ್ಯವಸ್ಥೆಯನ್ನು ರಾಜಕೀಯ ನಾಯಕರು ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆದಿರುವ ಆಯೋಗ ಇಂತಹ ವಹಿವಾಟುಗಳ ಮೇಲೆ ನಿಗಾ ವಹಿಸಿದೆ.
ಇದೀಗ ಇಂತಹ ಬ್ಯಾಂಕ್ ಖಾತೆಗಳ ಮೇಲೆ ಕಣ್ಣಿಟ್ಟಿರುವ ಚುನಾವಣಾ ಆಯೋಗ, ಯಾವ ಖಾತೆಗೆ ಹೆಚ್ಚು ಹಣ ಸಂದಾಯವಾಗುತ್ತದೆ ಎಂಬುದನ್ನು ಕುರಿತು ತಕ್ಷಣವೇ ಮಾಹಿತಿ ನೀಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಮಾಡಿದೆ. ಯಾವುದೇ ವ್ಯಕ್ತಿಯ ಖಾತೆಗೆ ಏಕಾಏಕಿ ಲಕ್ಷಗಟ್ಟಲೇ ಹಣ ಸಂದಾಯವಾದರೆ ಕೂಡಲೇ ಆಯೋಗದ ಗಮನಕ್ಕೆ ತರಬೇಕು. ಚುನಾವಣೆ ವೇಳೆ ನಡೆಯುವ ಅಕ್ರಮ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿರುವ ಆಯೋಗ ರಾಜ್ಯದ ಎಲ್ಲಾ ಬ್ಯಾಂಕ್ ಗಳ ಮುಖ್ಯಸ್ಥರಿಗೆ ಪತ್ರ ಬರೆದಿದೆ.