ಬೆಂಗಳೂರು – ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮ ಉಂಟಾಗಿರುವ ಸಮಸ್ಯೆ ಅಷ್ಟಿಷ್ಟಲ್ಲ. ರಾಜ್ಯದ ಬಹುತೇಕ ಪ್ರದೇಶ ಬರಗಾಲದ ದವಡೆಗೆ ಸಿಲುಕಿದೆ.ಇದರಿಂದ ವಿದ್ಯುತ್ ಬೇಡಿಕೆ ತೀವ್ರವಾಗಿ ಹೆಚ್ಚಳಗೊಂಡಿದೆ.ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಂಧನ ಇಲಾಖೆ ಮುಂದಿನ ಮಳೆಗಾಲದವರೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಿದೆ.
ರಾಜ್ಯದ ವಿವಿಧೆಡೆಯಿಂದ ವಿದ್ಯುತ್ ಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಬೆ ನಡೆಸಿದ ಇಂಧನ ಸಚಿವ ಕೆ.ಜೆ.ಜಾರ್ಜ್ ಬೇಡಿಕೆ ,ಲಭ್ಯತೆ ಮತ್ತು ಪೂರೈಕೆಯ ಅಗತ್ಯವನ್ನು ಲೆಕ್ಕಾಚಾರ ಹಾಕಿ ಕ್ರಿಯಾ ಯೋಜನೆ ರೂಪಿಸಿದ್ದಾರೆ.
ಮುಂದಿನ ಮೇ ತಿಂಗಳವರೆಗೂ ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಬಳಕೆಗೆ ಸಮಾನವಾಗಿ ಹಂಚಿಕೆ ಮಾಡಬೇಕು.ಬೇಡಿಕೆ ಮತ್ತು ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪೂರೈಕೆಯ ವೇಳಾಪಟ್ಟಿಯನ್ನು ಸಿದ್ದಪಡಿಸಿಟ್ಟುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಸ್ತುತ ಬೇಸಿಗೆಯ ಸಮಯದಲ್ಲಿ ಇರುತ್ತಿದ್ದ ವಿದ್ಯುತ್ ಬೇಡಿಕೆ ಕಳೆದ ಎರಡು ತಿಂಗಳಿನಿಂದಲೂ ಮುಂದುವರಿದಿದೆ. ಪ್ರಸ್ತುತ 16 ಸಾವಿರ ಮೆಗಾವಾಟ್‌ಗೆ ಬೇಡಿಕೆ ಇದೆ. ರಾಜ್ಯದ ಒಟ್ಟು ಉತ್ಪಾದನಾ ಸಾಮರ್ಥ್ಯ 32 ಸಾವಿರ ಮೆಗಾವಾಟ್‌ನಷ್ಟಿದೆ. ಹಾಗಿದ್ದರೂ ಜಲಾಶಯಗಳಲ್ಲಿ ನೀರಿನ ಕೊರತೆ, ಕಲ್ಲಿದ್ದಲು ಪೂರೈಕೆಯ ವ್ಯತ್ಯಯ, ಉತ್ಪಾದನಾ ಘಟಕಗಳ ವಾರ್ಷಿಕ ನಿರ್ವಹಣೆ ಮತ್ತಿತರ ಕಾರಣಗಳಿಂದ ಉತ್ಪಾದನೆ 10 ಸಾವಿರ ಮೆಗಾವಾಟ್ ದಾಟಿಲ್ಲ. ಕೇಂದ್ರ, ಇತರೆ ರಾಜ್ಯವೂ ಸೇರಿ 14 ಸಾವಿರ ಮೆಗಾವಾಟ್ ಲಭ್ಯವಾಗುತ್ತಿದೆ. ಇದರಿಂದ ಬೇಸಿಗೆ ಆರಂಭಕ್ಕೂ ನಾಲ್ಕು ತಿಂಗಳ ಮೊದಲೇ ವಿದ್ಯುತ್ ಬೇಡಿಕೆ ಹೆಚ್ಚಳಗೊಂಡಿದೆ.
ಪ್ರತಿವರ್ಷ ಸಾಮಾನ್ಯವಾಗಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕೃಷಿ ಬಳಕೆ ವಿದ್ಯುತ್ ಗೆ ಬೇಡಿಕೆ ಇರುವುದಿಲ್ಲ ಹೀಗಾಗಿ ವಿತರಣಾ ಸಂಸ್ಥೆಗಳು ಈ ತಿಂಗಳಲ್ಲಿ ಹೆಚ್ಚಿನ ವಿದ್ಯುತ್ ಅನ್ನು ಕೈಗಾರಿಕೆ ವಲಯಕ್ಕೆ ವರ್ಗಾವಣೆ ಮಾಡುತ್ತವೆ. ಅದೇ ರೀತಿಯಲ್ಲಿ ಈ ಬಾರಿಯೂ ನಿಯಮ ಪಾಲಿಸಲಾಗಿದೆ. ಆದರೆ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಕೃಷಿ ಬಳಕೆ ಪಂಪ್ ಸೆಟ್ ಗಳ ಬಳಕೆ ಹೆಚ್ಚಳವಾಗಿದ್ದು,ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ.
ಒಟ್ಟಾರೆ ರಾಜ್ಯದಲ್ಲಿ ವಿದ್ಯುತ್ ಹಂಚಿಕೆಯನ್ನು
ಕೃಷಿ ವಲಯಕ್ಕೆ ಶೇ 35, ಕೈಗಾರಿಕಾ ವಲಯಕ್ಕೆ ಶೇ 19.50ರಷ್ಟು ಹಂಚಿಕೆ ಮಾಡಲಾಗಿದೆ.ಉಳಿದ ವಿದ್ಯುತ್ ಗೃಹ ಬಳಕೆ,ಸರ್ಕಾರಿ ಕಚೇರಿಗಳು, ಕುಡಿಯುವ ನೀರಿನ ಯೋಜನೆಗಳಿಗೆ ಬಳಸಲಾಗುತ್ತದೆ.
ಇದರಲ್ಲಿ1.50 ಕೋಟಿ ಗೃಹ ಬಳಕೆದಾರರು ಹಾಗೂ 32 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ.
ಹೊರ ರಾಜ್ಯಗಳಿಂದಾಗುತ್ತಿರುವ ವಿದ್ಯುತ್ ಪೂರೈಕೆ ಯಲ್ಲೂ ವ್ಯತ್ಯಯವಾಗಿಇದನ್ನುಳೆದ 2 ತಿಂಗಳುಗಳಲ್ಲಿ ಕೇಂದ್ರ ಹಾಗೂ ಇತರೆ ರಾಜ್ಯಗಳಿಂದ 6 ಸಾವಿರ ಮೆಗಾವಾಟ್ ಖರೀದಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಕೇಂದ್ರ ಗ್ರಿಡ್ ನಿಂದ 3 ಸಾವಿರ ಮೆಗಾವಾಟ್ ಪೂರೈಸಿದರೆ, ಇತರೆ ರಾಜ್ಯಗಳಿಂದ ದೊರೆತಿರುವುದು 1 ಸಾವಿರ ಮೆಗಾವಾಟ್ ದೊರಕಿದೆ. ಹೀಗಾಗಿ ಕೊಂಚ ವ್ಯತ್ಯಾಸವಾಗಿದ್ದು, ಈಗ ಇದನ್ನು ಸರಿ ಪಡಿಸಲು ಕ್ರಿಯಾ ಯೋಜನೆ ಸಿದ್ದ ಪಡಿಸಲಾಗಿದೆ.
ಅದರಂತೆ ಸದ್ಯ ವಿದ್ಯುತ್ ಬೇಡಿಕೆ ಕಡಿಮೆಯಿರುವ ಉತ್ತರ ಪ್ರದೇಶದಿಂದ ಕೊಡು- ಕೊಳ್ಳುವಿಕೆ ಲೆಕ್ಕಾಚಾರದಲ್ಲಿ,ಈ ತಿಂಗಳಿನಿಂದ ಮುಂದಿನ ಜನವರಿಯವರೆಗೆ 600 ಮೆಗಾವ್ಯಾಟ್ ಪಡೆದು ಅದನ್ನು ಮುಂದಿನ ವರ್ಷ ಜೂನ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಹಿಂತಿರುಗಿಸಬೇಕು.ಅದೇ ರೀತಿಯಲ್ಲಿ ಪಂಜಾಬ್ ನಿಂದಲೂ ವಿದ್ಯುತ್ ಪಡೆಯಬೇಕು. ಖಾಸಗಿ ಸಂಸ್ಥೆಗಳ ಮಾರುಕಟ್ಟೆ ಸ್ಥಿತಿಗತಿ ಆಧರಿಸಿ ಖರೀದಿ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.
ಈ ಕುರಿತಂತೆ ಅಧಿಕಾರಿಗಳು ಸಂಬಂಧಿಸಿದ ಖಾಸಗಿ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲು ಸಲಹೆ ಮಾಡಿದ್ದು, ವಿದ್ಯುತ್ ಪೂರೈಕೆ ಸಮಯದಲ್ಲಿ ಯಾವುದೇ ರೀತಿಯಲ್ಲಿ ಸೋರಿಕೆಯಾಗಬಾರದು. ಎಲ್ಲಾ ವಲಯಕ್ಕೂ ಬೇಡಿಕೆ ಮತ್ತು ಲಭ್ಯತೆ ಅನುಪಾತದಲ್ಲಿ ವಿತರಣೆಗೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ.
ಗಂಭೀರ ಪರಿಸ್ಥಿತಿಯನ್ನು ಗಮನಿಸಿ ಜನ ಸಾಮಾನ್ಯರು ತಮ್ಮ ಬಳಕೆಯಲ್ಲಿ ಮಿತಿ ಮತ್ತು ಶಿಸ್ತು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.