ಬೆಂಗಳೂರಿನಲ್ಲಿ ಮತ್ತೊಮ್ಮೆ ರಾಜಕೀಯ ಹೈಡ್ರಾಮಾ ನಡೆದಿದ್ದು, ಒಡಿಸ್ಸಾ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ನಡೆದಿದೆ ಎನ್ನಲಾದ ‘ಆಪರೇಷನ್ ಕಮಲ’ದ ಯತ್ನವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಫಲಗೊಳಿಸಿದ್ದಾರೆ. ಅಡ್ಡಮತದಾನಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ತಲಾ 5 ಕೋಟಿ ರೂ. ಹಾಗೂ ಖಾಲಿ ಚೆಕ್ ನೀಡಿದ ಗಂಭೀರ ಆರೋಪ ಕೇಳಿಬಂದಿದೆ.
ಒಡಿಸ್ಸಾದಿಂದ ಬಂದಿರುವ ಕಾಂಗ್ರೆಸ್ ಶಾಸಕರು ಪ್ರಸ್ತುತ ಬಿಡದಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಶಾಸಕರನ್ನು ಭೇಟಿ ಮಾಡಿದ ನಾಲ್ವರು ವ್ಯಕ್ತಿಗಳು, ಅಡ್ಡಮತದಾನ ಮಾಡುವಂತೆ ಪ್ರಲೋಭನೆ ಒಡ್ಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಅವರು ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಮಾಧ್ಯಮಗಳಿಗೆ ತಿಳಿಸಿದರು.
ಒಡಿಸ್ಸಾದಿಂದ ಬಂದಿದ್ದ ನಾಲ್ವರು ವ್ಯಕ್ತಿಗಳು ಸ್ಥಳೀಯ ವ್ಯಕ್ತಿಯೊಬ್ಬನ ಸಹಾಯದಿಂದ ರೂಮ್ ಬುಕ್ ಮಾಡಿದ್ದರು. ನಮ್ಮ ಶಾಸಕರಿಗೆ ತಲಾ 5 ಕೋಟಿ ರೂ. ಆಮಿಷ ಒಡ್ಡಿದ್ದಲ್ಲದೆ, ಖಾಲಿ ಚೆಕ್‌ಗಳನ್ನು ನೀಡಿದ್ದಾರೆ. ಶಾಸಕರು ಈ ವಿಚಾರವನ್ನು ತಕ್ಷಣವೇ ನಮ್ಮ ಗಮನಕ್ಕೆ ತಂದರು. ಆಮಿಷ ಒಡ್ಡಿದವರ ಪೈಕಿ ಇಬ್ಬರನ್ನು ಹಿಡಿಯಲಾಗಿದ್ದು, ಅವರು ತಪ್ಪೊಪ್ಪಿಕೊಂಡಿದ್ದಾರೆ. ಇನ್ನುಳಿದ ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ಡಿಸಿಎಂ ವಿವರಿಸಿದರು.
ಭಾನುವಾರ ಸಂಜೆ ಒಡಿಸ್ಸಾ ಶಾಸಕರು ಸದಾಶಿವನಗರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ತಮ್ಮ ಪಕ್ಷದ ಅಧ್ಯಕ್ಷರನ್ನು ಶಾಸಕರು ಭೇಟಿ ಮಾಡುವುದು ಸಹಜವಾಗಿದ್ದು, ಸೋಮವಾರ ಬೆಳಿಗ್ಗೆ ಅವರು ಒಡಿಸ್ಸಾಗೆ ಮರಳಲಿದ್ದಾರೆ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.
ಈ ಕುರಿತು ಈಗಾಗಲೇ ಅಧಿಕೃತ ದೂರು ದಾಖಲಾಗಿದ್ದು, ಪೊಲೀಸರು ಆಮಿಷ ಒಡ್ಡಲು ತಂದಿದ್ದ ಚೆಕ್ ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡು ಮಹಜರ್ ನಡೆಸುತ್ತಿದ್ದಾರೆ. ಯಾವುದೇ ಕುದುರೆ ವ್ಯಾಪಾರಕ್ಕೆ ನಮ್ಮ ಶಾಸಕರು ಬಲಿಯಾಗುವುದಿಲ್ಲ, ಕಾನೂನು ತನ್ನ ಹಾದಿ ಹಿಡಿಯಲಿದೆ ಎಂದು ಹೇಳುವ ಮೂಲಕ ಡಿ.ಕೆ. ಶಿವಕುಮಾರ್ ತಾವು ಮತ್ತೊಮ್ಮೆ ‘ಟ್ರಬಲ್ ಶೂಟರ್’ ಎಂಬುದನ್ನು ಸಾಬೀತುಪಡಿಸಿದ್ದಾರೆ.

