ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ
ಅಕ್ರಮ ಆರೋಪದ ತನಿಖೆ ನಡೆಸುತ್ತಿರುವ ಲೋಕಾಯುಕ್ತರಿಗೆ ಜಾರಿ ನಿರ್ದೇಶನಾಲಯ ಪತ್ರ ಬರೆದಿದ್ದು ನಿವೇಶನ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ತಿಳಿಸಿದೆ
ಭೂಮಾಲೀಕರಿಗೆ 50:50ರ ಅನುಪಾತದಲ್ಲಿ ಪರಿಹಾರ ನಿವೇಶನ ನೀಡುವ ನಿಯಮವನ್ನು ರದ್ದುಪಡಿಸಿದ ಹಲವು ತಿಂಗಳ ನಂತರವೂ ಮುಡಾ 252 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದೆ ಎಂಬುದನ್ನು ಜಾರಿ ನಿರ್ದೇಶನಾಲಯ ಪತ್ರದಲ್ಲಿ ಉಲ್ಲೇಖಿಸಿದೆ.
ಆ ಅವಧಿಯಲ್ಲಿ ಮುಡಾ ಅಧ್ಯಕ್ಷರಾಗಿದ್ದ ಕೆ.ಮರೀಗೌಡ ಮತ್ತು ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಈ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ’ ಎಂದು ಹೇಳಿದೆ.
ಮುಖ್ಯಮಂತ್ರಿ ಪತ್ನಿ ಪಾರ್ವತಿ ಅವರಿಗೆ ಹಂಚಿರುವ ನಿವೇಶನಗಳೇ ಅಕ್ರಮವಾಗಿದ್ದು, ಈ ಸಂಬಂಧ ತಮ್ಮ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ತಿಳಿಸಿದೆ.
ಭೂಸ್ವಾಧೀನ ಮಾಡಿಕೊಳ್ಳಲಾದ ಜಮೀನುಗಳಿಗೆ 50:50ರ ಅನುಪಾತದಲ್ಲಿ ಪರಿಹಾರ ನಿವೇಶನಗಳನ್ನು ನೀಡುವ ಸಂಬಂಧ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ನಿಯಮಗಳು-2009’ಕ್ಕೆ 2015ರಲ್ಲಿ ತಿದ್ದುಪಡಿ ತರಲಾಗಿತ್ತು. ಈ ನಿಯಮದ ಅನ್ವಯವೇ ಸಾವಿರಾರು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. 2023ರ ಅಕ್ಟೋಬರ್‌ನಲ್ಲಿ 50:50ರ ಅನುಪಾತವನ್ನು ರದ್ದುಪಡಿಸಲಾಗಿತ್ತು ಎಂದು ಇ.ಡಿ ವಿವರಿಸಿದೆ.
ಹಿಂದಿನ ವರ್ಷವೇ ನಿಯಮ ರದ್ದಾಗಿದ್ದರೂ, 2024ರ ಮಾರ್ಚ್ ಅಂತ್ಯದವರೆಗೆ 252 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಈ ಹಂಚಿಕೆಗಳಿಗೆ ಯಾವುದೇ ಅನುಮತಿ ಪಡೆದಿಲ್ಲ. ಮರೀಗೌಡ ಮತ್ತು ದಿನೇಶ್ ಕುಮಾರ್ ಅವರ ಮೌಖಿಕ ಸೂಚನೆಯಂತೆ ಈ ಪ್ರಕ್ರಿಯೆ ನಡೆಸಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದೆ.
ಇದೊಂದು ದೊಡ್ಡ ಪ್ರಮಾಣದ ದಂಧೆಯಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳು ಕೇಳಿದ ನಿವೇಶನಗಳನ್ನೇ ಹಂಚಿಕೆ ಮಾಡಲಾಗಿದೆ. 252 ನಿವೇಶನಗಳನ್ನೂ ಒಳಗೊಂಡು ಒಟ್ಟು 1,094 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಜಮೀನಿನ ಮಾಲೀಕರೇ ಅಲ್ಲದವರಿಗೆ ಪರಿಹಾರ ನಿವೇಶನ ನೀಡಲಾಗಿದೆ. ಅವು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವರ್ಗಾವಣೆಯಾಗಿದ್ದು, ಅವರು ಅವುಗಳನ್ನು ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಿದ್ದಾರೆ ಎಂದು ವಿವರಿಸಿದೆ.
ಮುಡಾ ವ್ಯಾಪ್ತಿಯಲ್ಲಿ ಒಟ್ಟು 700 ಕೋಟಿ ಮೌಲ್ಯದ 1 ಸಾವಿರದ 95 ನಿವೇಶನಗಳನ್ನು ರಿಯಲ್ ಎಸ್ಟೇಟ್ Businessಿಗಳು ಹಾಗೂ ಪ್ರಭಾವಿಗಳಿಗೆ ಅಕ್ರಮವಾಗಿ ಹಂಚಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದ್ದು ಈ ಬಗ್ಗೆ ಕ್ರಮವಹಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸಲಹೆ ಮಾಡಿದೆ.